ಬೆಂಗಳೂರು: ಮನೆಕೆಲಸ ಮಾಡುವ ಮಹಿಳೆ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದಡಿ ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪತ್ನಿ ಹಾಗೂ ಮಗ ಸೇರಿದಂತೆ 9 ಮಂದಿ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಮಹಿಳೆ ಅನುರಾಧ ಎಂಬುವರು ನೀಡಿದ ದೂರಿನ ಮೇರೆಗೆ ರೇಖಾ ಜಗದೀಶ್, ಮಗ ಸ್ನೇಹಿತ್, ಮನೆಯ ಬೌನ್ಸರ್ಗಳಾದ ನಿಖಿಲ್, ಕುಮಾರ್, ರೋಹಿತ್ ಹಾಗೂ ಅಶೋಕ್ ಸೇರಿದಂತೆ 9 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಸೌಂದರ್ಯ ಜಗದೀಶ್ ಮನೆಯ ಪಕ್ಕದ ಮನೆಯೊಂದರಲ್ಲಿ ಅನುರಾಧ, ಕಳೆದ ಎರಡು ವರ್ಷಗಳಿಂದ ಮನೆ ಕೆಲಸ ಮಾಡಿ ತಾಯಿಯೊಂದಿಗೆ ವಾಸ ಮಾಡುತ್ತಿದ್ದರು. ಎಂದಿನಂತೆ ನಿನ್ನೆ ಬೆಳಗ್ಗೆ ಕಸ ಗುಡಿಸುವ ವಿಚಾರಕ್ಕಾಗಿ ಸ್ನೇಹಿತ್ ಹಾಗೂ ಆತನ ಸ್ನೇಹಿತರು ಗಲಾಟೆ ತೆಗೆದಿದ್ದಾರೆ. ಆಗ ಅನುರಾಧ ಮತ್ತು ಸ್ನೇಹಿತ್ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ.
ಕೆಲ ಹೊತ್ತಿನ ಬಳಿಕ ಸೌಂದರ್ಯ ಜಗದೀಶ್ ಹಾಗೂ ಬೌನ್ಸರ್ಗಳು ಮನೆ ಬಳಿ ಬಂದು ಮತ್ತೆ ಗಲಾಟೆ ತೆಗೆದಿದ್ದಾರೆ. ರೇಖಾ ಜಗದೀಶ್, ಇತರರು ತನ್ನ ಜೊತೆ ವಾಗ್ವಾದಕ್ಕೆ ಇಳಿದು, ವಿವಸ್ತ್ರಗೊಳಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ತನ್ನ ತಾಯಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಅನುರಾಧ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಅರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಹಲ್ಲೆ ಮಾಡಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಎಫ್ಐಆರ್ ದಾಖಲಾಗುತ್ತಿದ್ದಂತೆ ರೇಖಾ ಮನೆಯವರು ಪರಾರಿಯಾಗಿದ್ದಾರೆ.
ಸೌಂದರ್ಯ ಜಗದೀಶ್ ಪ್ರತಿಕ್ರಿಯೆ:
ಅಜ್ಞಾತ ಸ್ಥಳದಿಂದ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಸೌಂದರ್ಯ ಜಗದೀಶ್, ಯಾವ ಉದ್ದೇಶಕ್ಕೆ ಘಟನೆ ನಡೆದಿದೆ ಎಂಬುದು ಗೊತ್ತಿಲ್ಲ. ಮನೆಯಲ್ಲಿ ನಾವು ಇರಲಿಲ್ಲ, ಹೊರಗಡೆ ಹೋಗಿದ್ದೆವು. ಈ ವೇಳೆ ನಮ್ಮ ಮನೆ ಕೆಲಸದವರು, ಅವರ ಮನೆ ಕೆಲಸದವರು ಜಗಳ ಆಡಿದ್ದಾರೆ. ನಾವು ಬಂದ ಬಳಿಕ ಘಟನೆ ಬಗ್ಗೆ ಹೇಳಿದ್ದರು. ಈ ವೇಳೆ ಏನಾಯಿತು ಎಂದು ಕೇಳಲು ಹೋದಾಗ ನಮ್ಮ ಮಕ್ಕಳು ಜಗಳ ಬಿಡಿಸಲು ಯತ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಹೀಗಾಗಿದೆ. ನಮಗೆ ಗಲಾಟೆ ಮಾಡುವ ಯಾವುದೇ ಉದ್ದೇಶ ಇರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ನಾನು ಬದುಕಿರುವುದು ಸುದೀಪ್ ಮತ್ತು ನನ್ನ ಮಗಳಿಂದ: ನಿರ್ಮಾಪಕ ಸೂರಪ್ಪ ಬಾಬು