ಇಂದು ನಟ ಧ್ರುವ ಸರ್ಜಾ ಹುಟ್ಟುಹಬ್ಬ. ಈ ಬಾರಿ ಧ್ರುವ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಅಭಿಮಾನಿಗಳು ತಾವು ಇರುವಲ್ಲೇ ನನಗೆ ಶುಭ ಕೋರಿ, ಹರಿಸಿ ಎಂದು ಧ್ರುವ ನಿನ್ನೆಯೇ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದರು.
8 ವರ್ಷಗಳ ಬಳಿಕ ಮತ್ತೆ ಧ್ರುವ ಸರ್ಜಾ ಜೊತೆ ಸಿನಿಮಾ ಅನೌನ್ಸ್ ಮಾಡಿದ ನಿರ್ದೇಶಕ ಅರ್ಜುನ್ - Dhruva sarja 32nd Birthday
ಧ್ರುವ ಸರ್ಜಾ ಜೊತೆ ನಿರ್ದೇಶಕ ಎ.ಪಿ. ಅರ್ಜುನ್ ಹೊಸ ಚಿತ್ರವೊಂದನ್ನು ಅನೌನ್ಸ್ ಮಾಡಿದ್ದಾರೆ. ಸದ್ಯಕ್ಕೆ ಧ್ರುವ ಹಾಗೂ ಅರ್ಜುನ್ ಇಬ್ಬರೂ ಬ್ಯುಸಿ ಇರುವುದರಿಂದ ಈ ಹೊಸ ಚಿತ್ರ 2021 ಕೊನೆಯಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಧ್ರುವ ಸರ್ಜಾ ಹುಟ್ಟುಹಬ್ಬದಂದು ಅವರ ಮೊದಲ ಚಿತ್ರ 'ಅದ್ದೂರಿ' ನಿರ್ದೇಶಕ ಎ.ಪಿ. ಅರ್ಜುನ್ ಹೊಸ ಚಿತ್ರವೊಂದನ್ನು ಅನೌನ್ಸ್ ಮಾಡಿದ್ದಾರೆ. ಬರೋಬ್ಬರಿ 8 ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ. ಆದರೆ ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾ ಬಿಡುಗಡೆಯಾದ ನಂತರವೇ ಅರ್ಜುನ್ ಜೊತೆ ಅವರ ಹೊಸ ಸಿನಿಮಾ ಆರಂಭವಾಗಲಿದೆ. ಬಹುಶ: 2021 ರಲ್ಲಿ ಈ ಚಿತ್ರ ಆರಂಭವಾಗಬಹುದು ಎನ್ನಲಾಗಿದೆ.
ಅರ್ಜುನ್ ಕೂಡಾ ಸದ್ಯಕ್ಕೆ ಬ್ಯುಸಿ ಇದ್ದಾರೆ. ಫೆಬ್ರವರಿ 2020 ರಲ್ಲಿ 'ಕಿಸ್' 100ನೇ ದಿನದ ಕಾರ್ಯಕ್ರಮದಲ್ಲಿ'ಅದ್ದೂರಿ ಲವರ್' ಎಂಬ ಹೊಸ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. 'ಕಿಸ್' ಚಿತ್ರದ ಮೂಲಕ ತಮ್ಮದೇ ಅರ್ಜುನ್ ಪ್ರೊಡಕ್ಷನ್ಸ್ ಸಂಸ್ಥೆ ಸ್ಥಾಪಿಸಿದ್ದ ಅರ್ಜುನ್, ಅದ್ದೂರಿ ಲವರ್ ಚಿತ್ರದ ಮೂಲಕ ಹೊಸ ನಿರ್ದೇಶಕ ಪರಿಚಯ ಆಗುತ್ತಾರೆ ಎಂದು ಹೇಳಿದ್ದರು. ನಿಖಿಲ್ ಕುಮಾರಸ್ವಾಮಿ ಹಾಗೂ ಶಿವರಾಜ್ಕುಮಾರ್ ಜೊತೆ ಸಿನಿಮಾ ಮಾಡಲು ಕೂಡಾ ಅರ್ಜುನ್ ಕಥೆ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಇದೆಲ್ಲದರ ನಡುವೆ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಲು ಇನ್ನೂ ಸಮಯ ಬೇಕಾಗಬಹುದು.