ಬ್ಲ್ಯಾಕ್ ಅ್ಯಂಡ್ ವೈಟ್ ಸಿನಿಮಾ ಕಾಲದಿಂದಲೂ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಆಗಮನವಾಗುತ್ತಿದೆ. ಈಗಾಗಲೇ ಪ್ರೇಮ ಕಾರಂತ್, ಕವಿತಾ ಲಂಕೇಶ್, ವಿಜಯಲಕ್ಷ್ಮಿ, ಸುಮನ ಕಿತ್ತೂರು, ರೂಪ ಐಯ್ಯರ್ ಹೀಗೆ ಸಾಕಷ್ಟು ಮಹಿಳೆಯರು ಸಿನಿಮಾ ನಿರ್ದೇಶನ ಮಾಡುವ ಮೂಲಕ ನಿರ್ದೇಶಕಿಯರಾಗಿದ್ದಾರೆ. ಇದೀಗ ಕಪೋ ಕಲ್ಪಿತಂ ಸಿನಿಮಾ ಮೂಲಕ, ಸುಮಿತ್ರಾ ರಮೇಶ್ ಗೌಡ ಎಂಬುವವರು ನಿರ್ದೇಶಕಿಯಾಗಿ ಹೊರಹೊಮ್ಮಲಿದ್ದಾರೆ. ಚಿತ್ರದಲ್ಲಿ ಅಭಿನಯದ ಜೊತೆಗೆ ನಿರ್ದೇಶನ ಸಹ ಮಾಡಿದ್ದಾರೆ.
ಸಂಪೂರ್ಣ ಹೊಸಬರೇ ಸೇರಿಕೊಂಡು ನಿರ್ಮಾಣ ಮಾಡಿರೋ ಚಿತ್ರ ಕಪೋ ಕಲ್ಪಿತಂ. ಸೆನ್ಸಾರ್ ಮಂಡಳಿಯಿಂದ ಯುಎ ಪ್ರಮಾಣಪತ್ರ ಪಡೆದಿದೆ. ಇತ್ತೀಚೆಗೆ ಈ ಸಿನಿಮಾ ಕುರಿತಾಗಿ ನಟಿ ಹಾಗು ನಿರ್ದೇಶಕಿ ಸುಮಿತ್ರಾ ರಮೇಶ್ ಗೌಡ ಮಾಧ್ಯಮಗೋಷ್ಠಿ ನಡೆಸಿ, ಈ ಸಿನಿಮಾದ ವಿಶೇಷತೆ ಬಗ್ಗೆ ಹಂಚಿಕೊಂಡರು.
'ಕಪೋ ಕಲ್ಪಿತಂ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಮತ್ತೋರ್ವ ಮಹಿಳಾ ನಿರ್ದೇಶಕಿ ಎಂಟ್ರಿ ಸಿನಿಮಾದ ಹೆಸರು ಸಂಸ್ಕೃತ ಪದವಾಗಿದ್ದು, ಸ್ವಯಂ ಕಲ್ಪನೆ ಎಂಬ ಅರ್ಥ ಕೊಡುತ್ತದೆ. ಅಂದರೆ ಒಂದು ವಿಷಯವು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಹೆಚ್ಚಿಗೆ ಸೇರಿಕೊಂಡು ಸಂಶಯಕ್ಕೆ ನಾಂದಿಯಾಗುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಹಂಗಾಯ್ತು, ಹಿಂಗಾಯ್ತು ಎಂಬಂತೆ ಬಿಂಬಿತವಾಗುತ್ತದೆ. ಅದರಂತೆ ಕುತೂಹಲ ಹಾರರ್ ಕಥೆಯಲ್ಲಿ ಯುವಕರ ತಂಡವೊಂದು ದೂರದ ಮನೆಗೆ ಹೋಗುತ್ತಾರೆ. ಅಲ್ಲಿ ಭೂತವಿದೆ ಅಂತ ತಿಳಿದು ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾರೆ ಎನ್ನುವುದು ಚಿತ್ರದ ಸಾರಾಂಶವಾಗಿದೆ.
ಈ ಚಿತ್ರದ ನಿರ್ದೇಶನದ ಜೊತೆಗೆ ಪತ್ರಕರ್ತೆಯಾಗಿ ಈ ಸಿನಿಮಾದಲ್ಲಿ ಸುಮಿತ್ರಾ ರಮೇಶ್ ಗೌಡ ಅಭಿನಯಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮೂಲದ ಸುಮಿತ್ರಾ ರಮೇಶ್ ಗೌಡ ಈ ಹಿಂದೆ ’ಜಿಷ್ಣು’ ಸಿನಿಮಾದಲ್ಲಿ ಪಾತ್ರ ನಿರ್ವಹಿಸುವುದರ ಜೊತೆಗೆ ಸಹಾಯಕ ನಿರ್ದೇಶಕಿಯಾಗಿ ಅನುಭವ ಪಡೆದುಕೊಂಡಿದ್ದಾರೆ. ಹಿತೈಷಿಗಳ ಸಲಹೆಯಂತೆ ತಾನೇಕೆ ನಿರ್ದೇಶಕಿಯಾಗಬಾರದು ಎಂದು ಯೋಚಿಸಿದೆ. ಪ್ರತಿಫಲ ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಅಂತಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ನೋಡಿ: ಚಿರು ಹುಟ್ಟುಹಬ್ಬವನ್ನು ಅನಾಥರು, ವೃದ್ಧರೊಂದಿಗೆ ಆಚರಿಸಿದ ಧ್ರುವ
ಕಿರುತೆರೆ ನಟ ಮತ್ತು ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂ ಮಕ್ಕಿಹಾಲಿ ಚಿತ್ರದ ನಾಯಕ. ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಸಂದೀಪ್‌ಮಲಾನಿ, ನಿರೂಪಕರಾಗಿ ಗೌರೀಶ್‌ಅಕ್ಕಿ, ಉಳಿದಂತೆ ಶಿವರಾಜ್ ಕರ್ಕೆರ, ರಾಜೇಶ್ ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ ದೀಕ್ಷಿತ್‌ಗೌಡ ಮುಂತಾದವರ ತಾರಾಗಣವಿದೆ.
ಚಿತ್ರಕತೆ, ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ, ಸಂಗೀತ ಮತ್ತು ನಿರ್ಮಾಣದಲ್ಲಿ ಮಂಗಳೂರಿನ ಗಣಿದೇವ್ ಕಾರ್ಕಳ ಪಾಲುದಾರರಾಗಿದ್ದಾರೆ. ಬಾತುಕುಲಾಲ್ ಛಾಯಾಗ್ರಹಣ-ಸಂಕಲನ ಮಾಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಗಳ ಪ್ರಯತ್ನಕ್ಕೆ ತಂದೆ ರಮೇಶ್ ಚಿಕ್ಕೇಗೌಡ ಸವ್ಯಾಚಿ ಕ್ರಿಯೇಶನ್ಸ್ ಮೂಲಕ ಅಕ್ಷರ ಪ್ರೊಡಕ್ಷನ್ ಸಹಯೋಗದೊಂದಿಗೆ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ಕವಿತಾ ಕನ್ನಿಕಾ ಪೂಜಾರಿ ಸೇರಿಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.