ಬೆಂಗಳೂರು: ನಮ್ಮೆಲ್ಲರ ನೆಚ್ಚಿನ ಅಪ್ಪು ಅಗಲಿದ ಬಳಿಕ ದಕ್ಷಿಣ ಭಾರತ ಚಿತ್ರರಂಗದ ಅನೇಕ ತಾರೆಯರು ಪುನೀತ್ ರಾಜ್ಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ಇಂದು ಪುನೀತ್ ಸ್ನೇಹಿತರಲ್ಲಿ ಒಬ್ಬರಾದ ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಅಪ್ಪು ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಖಾಸಗಿ ವಿಮಾನದಲ್ಲಿ ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ಗೆ ಬಂದಿಳಿದ ಅಲ್ಲು ಅರ್ಜುನ್ ಮೊದಲಿಗೆ ನಾಗಾವರದಲ್ಲಿರುವ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದರು. ಬಳಿಕ ಶಿವಣ್ಣನ ಜೊತೆ ಸೇರಿ ನೇರ ಸದಾಶಿವ ನಗರದಲ್ಲಿರುವ ಅಪ್ಪು ಮನೆಗೆ ಭೇಟಿ ನೀಡಿದರು. ಮನೆಯಲ್ಲಿ ಅಪ್ಪು ಫೋಟೋಗೆ ನಮಿಸಿದ ಅಲ್ಲು ಅರ್ಜುನ್ ಪುನೀತ್ ಪತ್ನಿ ಅಶ್ವಿನಿ ಅವರೊಂದಿಗೆ ಮಾತುಕತೆ ನಡೆಸಿ, ಸಮಾಧಾನ ಹೇಳಿದರು.
ಪುನೀತ್ ರಾಜ್ಕುಮಾರ್ ಸಮಾಧಿಗೂ ಭೇಟಿ ನೀಡಿದ ಬನ್ನಿ, ಇದರ ಜೊತೆಗೆ ರಾಜ್ ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಹಾಗು ಅಂಬರೀಶ್ ಅವರ ಸಮಾಧಿಗೆ ನಮಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಲ್ಲು, "ಎಲ್ಲರಗೂ ನಮಸ್ಕಾರ. ಬೆಂಗಳೂರಿಗೆ ಬಂದು ಪುನೀತ್ ರಾಜ್ಕುಮಾರ್ ಕುಟುಂಬವನ್ನ ಭೇಟಿ ಮಾಡಬೇಕೆಂದು ನಾನು ತುಂಬಾ ದಿನದಿಂದ ಎದುರು ನೋಡುತ್ತಿದ್ದೆ. 'ಪುಷ್ಪ' ಸಿನಿಮಾದ ಗಜಿಬಿಜಿ ಮುಗಿದು ಶಾಂತವಾಗಿ ಬಂದು ಮೀಟ್ ಮಾಡಬೇಕು ಅಂದುಕೊಂಡಿದ್ದೆ. ಇಂದು ಬಂದು ಭೇಟಿ ಮಾಡಿದ್ದೇನೆ. ಹೇಳೊದಕ್ಕೆ ಏನೂ ಇಲ್ಲ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು. ನಾನು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಆಗ್ತಾ ಇದ್ದೆ. ಅವರು ಹೈದರಾಬಾದ್ಗೆ ಬಂದಾಗ ನನ್ನ ಭೇಟಿ ಆಗ್ತಾ ಇದ್ರು" ಎಂದರು.