ನಟ ವಿನೋದ್ ಪ್ರಭಾಕರ್ ಬಗ್ಗೆ ಅಪಪ್ರಚಾರ ನಡೆಯುತ್ತಲೇ ಇರುತ್ತದೆ. ಅವರು ಹಾಗಂತೆ, ಹೀಗಂತೆ ಎಂಬ ವಿಷಯಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ, ವಿನೋದ್ ಮಾತ್ರ ಯಾವತ್ತೂ ಅದಕ್ಕೆ ಸಮಜಾಯಿಷಿ ಕೊಡುವುದಕ್ಕೆ ಹೋಗಿರಲಿಲ್ಲ. ಫಾರ್ ದಿ ಫಸ್ಟ್ ಟೈಮ್ ವಿನೋದ್ ತಮ್ಮ ಮೇಲೆ ಹೊಸದಾಗಿ ಹುಟ್ಟಿಕೊಂಡಿರುವ ಸುದ್ದಿಯ ಕುರಿತು ಮಾತನಾಡಿದ್ದಾರೆ.
ಗುರುವಾರ ವರದ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಅವರು, ತಮ್ಮ ಬಗ್ಗೆ ಶುರುವಾಗಿರುವ ಹೊಸ ಅಪಪ್ರಚಾರದ ಕುರಿತು ಮಾತನಾಡಿದ್ದಾರೆ. ನಾನು ಚಿತ್ರದಲ್ಲಿ ನಟಿಸುವುದಕ್ಕೆ ಒಂದು ಕೋಟಿ ರೂ. ಸಂಭಾವನೆ ಪಡೆಯುತ್ತೇನೆ ಎಂದು ಯಾರೋ ಅಪಪ್ರಚಾರ ಮಾಡುತ್ತಿದ್ದಾರೆ. ಅದು ಸುಳ್ಳು. ನಾನು ನಿರ್ಮಾಪಕರ ನಟ.
ನಾನು ಯಾವತ್ತೂ ಅಷ್ಟೊಂದು ಸಂಭಾವನೆ ಕೇಳಿಲ್ಲ, ಕೇಳುವುದೂ ಇಲ್ಲ. ಏಕೆಂದರೆ, ನನ್ನ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ, ನಾನೇ ನಿರ್ಮಾಪಕರಿಗೆ ಹೆಚ್ಚು ಖರ್ಚು ಮಾಡಬೇಡಿ. ಮಿತಿಯಲ್ಲಿ ಸಿನಿಮಾ ಮಾಡಿ ಅಂತಾ ಹೇಳುತ್ತೇನೆ. ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಿದವರು ನಷ್ಟ ಮಾಡಿಕೊಳ್ಳಬಾರದು. ನಾನ್ಯಾವತ್ತೂ ನನ್ನ ನಿರ್ಮಾಪಕರಿಗೆ ಹೊರೆಯಾಗಿರುವುದಕ್ಕೆ ಇಷ್ಟವಿಲ್ಲ ಎಂದು ವಿನೋದ್ ಹೇಳಿದ್ದಾರೆ.
ಈ ಕುರಿತು ಇನ್ನಷ್ಟು ಮಾತನಾಡಿರುವ ಅವರು, ಮೊದಲೇ ಕೋವಿಡ್ನಿಂದಾಗಿ ಸಿನಿಮಾ ಮಾಡುವುದಕ್ಕೆ ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ, ಈ ರೀತಿ ಅಪಪ್ರಚಾರ ಮಾಡಿದರೆ ಸಿನಿಮಾ ಮಾಡುವುದಕ್ಕೆ ಯಾರೂ ಮುಂದೆ ಬರುವುದಿಲ್ಲ. ದಯವಿಟ್ಟು ನನ್ನ ಅನ್ನದ ತಟ್ಟೆಯನ್ನು ಒದೆಯಬೇಡಿ ಎಂದು ವಿನೋದ್ ಪ್ರಭಾಕರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ನಾನು ಯಾವತ್ತೂ ಒಂದು ಕೋಟಿ ರೂ ಸಂಭಾವನೆ ಕೇಳಿಲ್ಲ : ವಿನೋದ್ ಪ್ರಭಾಕರ್