ಮೊನ್ನೆ ಅಂದ್ರೇ ಜೂನ್ 6ರಂದು ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಂಡರು. ಕನ್ನಡ ಸಿನಿಮಾಗಳ ಶ್ರೀಮಂತಿಕೆಗೆ ಶ್ರಮಿಸುತ್ತಿರುವ ಈ ಪ್ರತಿಭಾವಂತ ಶ್ರಮಜೀವಿಗೆ ಇಡೀ ಕನ್ನಡ ಚಿತ್ರರಂಗವೇ ಶುಭಾಶಯ ಕೋರಿತು. ಅದರಂತೆ ನಟಿ ರಶ್ಮಿಕಾ ಕೂಡ ವಿಶ್ ಮಾಡಬಹುದು ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ, ಈ ನಿರೀಕ್ಷೆಯನ್ನು ಹುಸಿಯಾಗಿಸಿದ ಕೊಡಗಿನ ಬೆಡಗಿ, ತಮ್ಮ ಟ್ವಿಟರ್ನ್ನಾಗಲಿ, ಇನ್ಸ್ಟಾಗ್ರಾಂನಲ್ಲಾಗಲಿ ರಕ್ಷಿತ್ಗೆ ಜನ್ಮದಿನದ ಶುಭ ಕೋರಿಲ್ಲ. ಇದು ರಿಚ್ಚಿಯ ಫ್ಯಾನ್ಸ್ಗೆ ಕೋಪ ತರಸಿದೆ. ಮೊನ್ನೆಯಿಂದಲೇ ರಶ್ಮಿಕಾ ವಿರುದ್ಧ ಹರಿಹಾಯುತ್ತಿದ್ದ ಅಭಿಮಾನಿಗಳು ನಿನ್ನೆ ಟ್ವಿಟರ್ಗೆ ಬಂದಿದ್ದ ರಶ್ಮಿಕಾಳ ಮೇಲೆ ಮುಗಿಬಿದ್ದು, ಟೀಕೆಗಳ ಸುರಿಮಳೆಗೈದಿದ್ದಾರೆ.
ಮೇ 31 ರಿಂದ ಟ್ವಿಟರ್ಲ್ಲಿ ಯಾವುದೇ ಪೋಸ್ಟ್ ಮಾಡದ ರಶ್ಮಿಕಾ ನಿನ್ನೆ ತಮ್ಮ ಡಿಯರ್ ಕಾಮ್ರೇಡ್ ಸಿನಿಮಾ ಪೋಸ್ಟರ್ ಹಾಕಿಕೊಂಡಿದ್ದರು. ಇದನ್ನು ನೋಡಿದ ರಕ್ಷಿತ್ ಅಭಿಮಾನಗಳ ಕೋಪ ನೆತ್ತಿಗೇರಿದಂತೆ ಕಾಣುತ್ತೆ. ತಕ್ಷಣವೇ ಬಾಯಿಗೆ ಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದವರಿಗೆ ಒಂದು ವಿಶ್ ಮಾಡುವ ಯೋಗ್ಯತೆ ಇಲ್ವಾ ಎಂದು ಪ್ರಶ್ನಿಸತೊಡಗಿದ್ದಾರೆ.