ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಮೇ ತಿಂಗಳಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಚಿತ್ರವೊಂದು ಸೆಟ್ಟೇರಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಎಲ್ಲವೂ ತಲೆಕೆಳಗಾಗಿದೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದ ದರ್ಶನ್, ಆದಷ್ಟು ಬೇಗ ಚಿತ್ರೀಕರಣವನ್ನು ಮುಗಿಸಿ ಅಕ್ಟೋಬರ್ ತಿಂಗಳಿಗೆ ಚಿತ್ರ ಬಿಡುಗಡೆ ಮಾಡಿಸಬೇಕೆಂದು ಯೋಚಿಸಿದ್ದರು. ಮೇ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭಿಸಿ, ಮೂರು ತಿಂಗಳೊಳಗೆ ಚಿತ್ರೀಕರಣ ಮುಗಿಸಿಸುವ ಯೋಚನೆ ಇತ್ತು. ಆದರೆ, ಕೊರೊನಾ ಕಾರಣದಿಂದ ಎಲ್ಲವೂ ಸ್ಥಗಿತಗೊಂಡಿದೆ.
ಹೀಗಾಗಿ, ಕೊರೊನಾ ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆಯೇ ದರ್ಶನ್ ತಮ್ಮ ಮೈಸೂರಿನ ತೋಟದ ಮನೆಗೆ ಹೋಗಿದ್ದಾರಂತೆ. ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆಯೇ ಮೈಸೂರಿನ ತೋಟದ ಮನೆಗೆ ಬಂದಿದ್ದೇನೆ. ಇಲ್ಲೊಂದಿಷ್ಟು ಕೃಷಿ ಕೆಲಸಗಳಿದ್ದು, ಅದರಲ್ಲಿ ತೊಡಗಿಸಿಕೊಂಡಿದ್ದೇನೆ. ತೋಟದಲ್ಲಿದ್ದು, ಕೊಟ್ಟಿಗೆಯಲ್ಲಿ ಹಸುಗಳ ಕೆಲಸ ಮಾಡುತ್ತಿದ್ದರೆ ಇಮ್ಯುನಿಟಿ ಪವರ್ ಸಹ ಹೆಚ್ಚುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.
ಕೊರೊನಾ ಕರ್ಫ್ಯೂ ಮುಗಿದು ಚಿತ್ರೀಕರಣ ಮಾಡುವುದಕ್ಕೆ ಸೇಫ್ ಎನಿಸಿದಾಗಲಷ್ಟೇ ದರ್ಶನ್ ವಾಪಾಸ್ ಚಿತ್ರೀಕರಣ ಮರಳಲಿದ್ದಾರೆ. ಅದಕ್ಕೆ ಏನಿಲ್ಲವೆಂದರೂ ಮೂರು ಅಥವಾ ನಾಲ್ಕು ತಿಂಗಳಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ ಹೊತ್ತಿಗೆ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದರೂ ಆ ಚಿತ್ರ ಬಿಡುಗಡೆಯಾಗುವುದೇನಿದ್ದರೂ ಮುಂದಿನ ವರ್ಷವೇ ಆಗಲಿದೆ.
ಇದನ್ನೂ ಓದಿ:ಮತ್ತೆ ಹೊಸಬರ ಜೊತೆ ಸಿನಿಮಾ ಮಾಡಲಿದ್ದಾರೆ ನಿರ್ದೇಶಕ ಶಶಾಂಕ್