ನವದೆಹಲಿ :ತೀವ್ರ ವಿರೋಧದ ಹಿನ್ನೆಲೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ತಾವು ಮಾಡಿದ ಪ್ರಮಾದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಯಾಚಿಸಿದ್ದಾರೆ.
ಮತದಾನೋತ್ತರ ಸಮೀಕ್ಷೆಗಳ ಕುರಿತು ನಿನ್ನೆ ಸಾಕಷ್ಟು ಮೀಮ್ಸ್, ಟ್ರೋಲ್ಗಳು ಹರಿದಾಡಿದ್ದವು. ಅವುಗಳ ಪೈಕಿ ನಟಿ ಐಶ್ವರ್ಯ ರೈ ಫೋಟೋ ಬಳಸಿ ಮಾಡಲಾಗಿದ್ದ ಮೀಮ್ ವಿವೇಕ್ ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟ್ನಲ್ಲಿ ಮೋಹಕ ತಾರೆ ಐಶ್ವರ್ಯ ರೈ ಮೊದಲಿಗೆ ಸಲ್ಮಾನ್ ಜತೆ, ನಂತರ ವಿವೇಕ್ ಒಬೆರಾಯ್, ಕೊನೆಗೆ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಜತೆ ಇರುವ ಚಿತ್ರಗಳನ್ನು ಮರ್ಜ್ ಮಾಡಿಲಾಗಿದ್ದು, ಈ ಚಿತ್ರಗಳ ಎದುರು ಅನುಕ್ರಮವಾಗಿ opinion poll,exit poll ಹಾಗೂ result poll ಎಂದು ಬರೆಯಲಾಗಿತ್ತು.
ಎಕ್ಸಿಟ್ ಪೋಲ್ ವರದಿಗಳು ಪ್ರಕಟವಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಈ ಮೀಮ್ ಸಾಕಷ್ಟು ಸದ್ದು ಮಾಡುತ್ತಿದೆ. ಇದನ್ನೇ ತಮ್ಮ ಅಧಿಕೃತ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದ ವಿವೇಕ್ ವಿರುದ್ಧ ನೆಟ್ಟಿಗರು ಮುಗಿಬಿದ್ದಿದ್ದರು. ಒಬ್ಬ ಹೆಣ್ಣು ಮಗಳನ್ನು, ಅದರಲ್ಲೂ ನೀವೂ ನಟರಾಗಿ ಮತ್ತೋರ್ವ ನಟಿಯನ್ನು ಈ ರೀತಿ ಟ್ರೋಲ್ಗೆ ಬಳಸುವುದು ಎಷ್ಟು ಸರಿ? ನೀವು ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಳ್ಳಲಾಗಿತ್ತು.
ತಮ್ಮ ಪೋಸ್ಟ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಇಂದು ಮುಂಜಾನೆ ಟ್ವಟ್ಟರ್ನಿಂದ ಆ ಪೋಸ್ಟ್ ಡಿಲೀಟ್ ಮಾಡಿರುವ ಒಬೆರಾಯ್, ನನ್ನ ಟ್ವೀಟ್ನಿಂದ ಯಾವುದಾದರೂ ಮಹಿಳೆಗೆ ನೋವಾಗಿದ್ದರೆ ಕ್ಷಮಿಸಿ ಎಂದು ಟ್ವಿಟ್ಟಿಸಿದ್ದಾರೆ.
ಮತ್ತೊಂದು ಟ್ವಿಟ್ನಲ್ಲಿ 10 ವರ್ಷಗಳಲ್ಲಿ 2000 ದುರ್ಬಲ ಹೆಣ್ಣುಮಕ್ಕಳಿಗೆ ಕಾಯಕಲ್ಪ ನೀಡಿದ್ದೇನೆ. ಇದುವರೆಗೆ ಯಾವೊಂದು ಹೆಣ್ಣು ಮಗಳಿಗೂ ನಾನು ಅಗೌರವ ತೋರಿಲ್ಲ ಎಂದಿದ್ದಾರೆ.