ಹಿಂದಿಯ 'ಕಬೀರ್ ಸಿಂಗ್' ಸಿನಿಮಾ ಬ್ಲಾಕ್ ಬಸ್ಟರ್ನತ್ತ ಸಾಗುತ್ತಿದೆ. ದಿನದಿಂದ ದಿನಕ್ಕೆ ಥಿಯೇಟರ್ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಹೆಚ್ಚಾಗಿ
ಹದಿಹರೆಯದ ಪಡ್ಡೆ ಹೈಕಳನ್ನು ಚಿತ್ರಮಂದಿರಗಳತ್ತ ಹೆಚ್ಚು ಸೆಳೆಯುತ್ತಿದೆ. ಅದು ಎಷ್ಟರ ಮಟ್ಟಿಗೆಯಂದ್ರೆ ಈ ಚಿತ್ರ ನೋಡಲೇಬೇಕೆಂಬ ಹಟಕ್ಕೆ ಬಿದ್ದಿರುವ ಅಪ್ರಾಪ್ತ ವಯಸ್ಕರು ತಮ್ಮ ಆಧಾರ್ ಕಾರ್ಡ್ಗಳನ್ನೇ ತಿದ್ದುಪಡಿ ಮಾಡಿಕೊಳ್ಳುತ್ತಿದ್ದಾರಂತೆ.
ಹೌದು, ಲವ್ ಕಮ್ ಆ್ಯಕ್ಷನ್ ಕಥಾಹಂದರದ 'ಕಬೀರ್ ಸಿಂಗ್' ಸಿನಿಮಾದಲ್ಲಿ ಮಸ್ತ್ ಎನ್ನಿಸುವ ಕಿಸ್ ಸೀನ್ಗಳಿವೆ. ಅದರಲ್ಲೂ ಹುಡುಗಿಯಿಂದ ದೂರವಾಗುವ ನಾಯಕ ನಟ ವಿಪರೀತ ಅನ್ನೋವಷ್ಟು ಕುಡಿತಕ್ಕೆ ದಾಸನಾಗುತ್ತಾನೆ. ಡ್ರಗ್ಗೆ ಅಡಿಕ್ಟ್ ಆಗ್ತಾನೆ. ಇದನ್ನೆಲ್ಲ ಗಮನಿಸಿರುವ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ 'A' ಸರ್ಟಿಫಿಕೇಟ್ ಕರುಣಿಸಿದೆ. ಪರಿಣಾಮ ಮಾಲ್ಗಳಲ್ಲಿ ಅಪ್ರಾಪ್ತ ವಯಸ್ಕರರಿಗೆ ಸಿನಿಮಾ ನೋಡುವುದಕ್ಕೆ ಕೊಂಚ ಕಷ್ಟವಾಗುತ್ತಿದೆಯಂತೆ. ಇದಕ್ಕೆ ತಮ್ಮದೇ ಪರಿಹಾರ ಕಂಡುಕೊಂಡಿರುವ ನಾರ್ಥ್ ಇಂಡಿಯಾ ಹುಡುಗರು, ಆಧಾರ್ ಕಾರ್ಡ್ನಲ್ಲಿ ತಮ್ಮ ಡೇಟ್ ಆಫ್ ಬರ್ತ್ ಬದಲಾಯಿಸಿಕೊಳ್ಳುತ್ತಿದ್ದಾರಂತೆ.