ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಜೂನ್ 14 ರಂದು ಮುಂಬೈ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಸಾವಿಗೆ ಇಡೀ ಭಾರತೀಯ ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದರು.
ಇನ್ನು ಸುಶಾಂತ್ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಅದೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯ್ತು ಎಂಬ ವಿಚಾರ ಕೂಡಾ ಹೊರಬಿದ್ದಿದೆ. ಈ ಸಂಬಂಧ ಸಾಮಾನ್ಯರು ಸೇರಿದಂತೆ ಸೆಲಬ್ರಿಟಿಗಳು ಕೂಡಾ ಮಾನಸಿಕ ಖಿನ್ನತೆ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಬರೆಯುತ್ತಿದ್ದಾರೆ. ಬಾಲಿವುಡ್ ನಟಿ, ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ಕೂಡಾ ಇದೀಗ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.
'ಸುಶಾಂತ್ ದುರಂತದ ನಂತರ ಯಾವ ಪತ್ರಿಕೆ ನೋಡಿದರೂ ಆತನದ್ದೇ ಸುದ್ದಿ, ಮಾನಸಿಕ ಖಿನ್ನತೆ ಬಗ್ಗೆ ಬರಹಗಳು ಕಾಣಲಾರಂಭಿಸಿದವು. ನಾನು ಬಹಳ ದಿನಗಳ ಮುನ್ನ ಯೂಟ್ಯೂಬ್ ಚಾನೆಲ್ ಆರಂಭಿಸಿದಾಗ ಕೂಡಾ ಕೆಲವರು ಪದೇ ಪದೇ ಒಂದೇ ವಿಷಯದ ಬಗ್ಗೆ ಕಮೆಂಟ್ ಮಾಡುತ್ತಿದ್ದರು. ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ನನ್ನನ್ನು ಬಹಳ ಜನರು ಕೇಳುತ್ತಿದ್ದರು. ಈ ಸಂದೇಶಗಳನ್ನು ನೋಡಿ ನನಗೂ ಕೂಡಾ ಈ ಬಗ್ಗೆ ಮಾತನಾಡಬೇಕು ಎಂದೆನಿಸುತ್ತಿತ್ತು. ಆದರ ಸುಶಾಂತ್ ಸಾವಿನ ನಂತರ ಹುಚ್ಚಿಯಂತೆ ಬರೆಯಲು ಆರಂಭಿಸಿದೆ. ನನ್ನ ಬರಹದಿಂದ ಯಾರಿಗಾದರೂ ಸಹಾಯವಾಗಬಹುದು ಎಂಬುದೇ ನನ್ನ ಉದ್ದೇಶ'.
'ನಾವು ಎಂದಿಗೂ ನಮ್ಮ ಅಮೂಲ್ಯ ಜೀವನವನ್ನು ಕಳೆದುಕೊಳ್ಳಬಾರದು. ಕೊನೆಯವರೆಗೂ ಗೆಲುವಿಗಾಗಿ ಹೋರಾಡಿ. ಅಗತ್ಯವಿದ್ದಾಗ ತಪ್ಪದೆ ಯಾರ ಸಹಾಯವಾದರೂ ಕೇಳಿ. ನಿಮ್ಮ ಮಾನಸಿಕ ಶಾಂತಿಯನ್ನು ನೀವೇ ಕಾಪಾಡಿಕೊಳ್ಳಿ. ಏನಾದರೂ ದುರಂತ ಸಂಭವಿಸಿದಾಗ ನಾವು ಬಹಳ ಸುಲಭವಾಗಿ ಇತರರನ್ನು ದೂಷಿಸುತ್ತೇವೆ. ಆದರೆ ಇನ್ನೊಬ್ಬರನ್ನು ದೂಷಿಸುವ ಬದಲು ನಮ್ಮ ತಪ್ಪು ಏನು ಎಂಬುದನ್ನು ಮೊದಲು ಯೋಚಿಸಬೇಕು. ನಮ್ಮ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳಬೇಕು. ಏಕೆಂದರೆ ಇಂತಹ ದೂಷಣೆಗಳೇ ಮನುಷ್ಯನನ್ನು ಖಿನ್ನತೆಗೆ ದೂಡುತ್ತದೆ. ಆದರೆ ಒಬ್ಬರನೊಬ್ಬರು ದೂಷಿಸುವ ಆಟದಲ್ಲಿ ಕೊನೆಗೆ ಯಾರಿಗೆ ಯಾರೂ ಸಹಾಯ ಮಾಡುವುದಿಲ್ಲ' ಎಂದು ಸುಷ್ಮಿತಾ ಸೇನ್ ಬರೆದುಕೊಂಡಿದ್ದಾರೆ.
ಸುಷ್ಮಿತಾ ಕರಿಯರ್ ವಿಚಾರಕ್ಕೆ ಬರುವುದಾದರೆ 'ಆರ್ಯ' ಎಂಬ ವೆಬ್ ಸೀರೀಸ್ನಲ್ಲಿ ಅವರು ನಟಿಸಿದ್ದು ಈ ಸೀರೀಸ್ ನಾಳೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ನಲ್ಲಿ ಬಿಡುಗಡೆಯಾಗುತ್ತಿದೆ. ಈ ಸೀರೀಸ್ ಮೂಲಕ ಸುಮಾರು 5 ವರ್ಷಗಳ ನಂತರ ಸುಷ್ಮಿತಾ ಸೇನ್ ಮತ್ತೆ ಆ್ಯಕ್ಟಿಂಗ್ಗೆ ವಾಪಸ್ ಬಂದಿದ್ದಾರೆ. 'ಆರ್ಯ' ಸೀರೀಸನ್ನು ರಾಮ್ ಮಾಧವಾನಿ ನಿರ್ದೇಶಿಸಿದ್ದಾರೆ.