ಬಾಲಿವುಡ್ ಚಿತ್ರರಂಗದಲ್ಲಿ ಇಂದಿಗೂ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಕೆಲವರು ಇದು ಆತ್ಮಹತ್ಯೆಯಲ್ಲ. ಪೂರ್ವಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂಬ ಒತ್ತಾಯ ಕೂಡಾ ಕೇಳಿ ಬರುತ್ತಿದೆ.
ಈ ನಡುವೆ ಸಚಿನ್ ತಿವಾರಿ, 'ಸೂಸೈಡ್ ಆರ್ ಮರ್ಡರ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರವನ್ನು ಶಮಿಕ್ ಮಲಿಕ್ ನಿರ್ದೇಶಿಸುತ್ತಿದ್ದಾರೆ. ಹೆಸರು ಕೇಳುತ್ತಿದ್ದಂತೆ ಇದು ಸುಶಾಂತ್ ಸಿಂಗ್ ರಜಪೂತ್ ಬಯೋಪಿಕ್ ಆಗಿರಬಹುದಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ ನಿರ್ದೇಶಕ ಶಮಿಕ್ ಮೌಲಿಕ್ ಇದನ್ನು ನಿರಾಕರಿಸಿದ್ದಾರೆ.
'ಇದು ಖಂಡಿತ ಬಯೋಪಿಕ್ ಅಲ್ಲ, ಯುವಕ-ಯುವತಿ ಇಬ್ಬರು ಪುಟ್ಟ ಹಳ್ಳಿಯಿಂದ ಪಟ್ಟಣಕ್ಕೆ ಎಷ್ಟೋ ಕನಸುಗಳನ್ನು ಹೊತ್ತು ಬರುತ್ತಾರೆ. ಅದೇ ರೀತಿ ಯಶಸ್ಸನ್ನು ಆನಂದಿಸುತ್ತಾರೆ. ತಮ್ಮ ಗುರಿಯನ್ನು ತಲುಪಬೇಕು ಎನ್ನುವಷ್ಟರಲ್ಲಿ ಕೆಲವರು ಅದನ್ನು ತಡೆಯುತ್ತಾರೆ. ಏಕೆಂದರೆ ಸಮಾಜದ ಉನ್ನತ ಸ್ಥಾನದಲ್ಲಿರುವ ಜನರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲು ಬಯಸುವುದಿಲ್ಲ'. ಇದು ಚಿತ್ರದ ಕಥೆ ಎಂದು ಶಮಿಕ್ ಸ್ಪಷ್ಟಪಡಿಸಿದ್ದಾರೆ.
'ಸಚಿನ್ ತಿವಾರಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಉಳಿದ ಪಾತ್ರಗಳ ಆಯ್ಕೆ ನಡೆಯಬೇಕಿದೆ. ಸಾವು ಯಾವಾಗ, ಯಾವ ರೀತಿ ಬರುತ್ತದೆ ಯಾರಿಗೂ ತಿಳಿದಿಲ್ಲ. ಕೆಲವೊಮ್ಮ ನಿಮ್ಮ ಜೀವನವನ್ನು ನೀವೇ ಕೊನೆ ಮಾಡಿಕೊಳ್ಳುವ ಎಷ್ಟೋ ಘಟನೆಗಳು ಜರುಗುತ್ತವೆ. ಅದರಲ್ಲಿ ಮಾನಸಿಕ ಖಿನ್ನತೆ ಮುಖ್ಯವಾದ ವಿಚಾರ' ಎಂದು ಶಮಿಕ್ ಮೌಲಿಕ್ ಹೇಳಿದ್ದಾರೆ.