ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಂಟೆಡ್, ದಬಂಗ್ 3 ನಂತರ ನಿರ್ದೇಶಕ ಪ್ರಭುದೇವ-ಸಲ್ಮಾನ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಸಿನಿಮಾ ಇದಾಗಿದೆ. ಚಿತ್ರತಂಡ ಈದ್ ಹಬ್ಬದ ಪ್ರಯುಕ್ತ ಮೇ 13ರಂದು ಒಟಿಟಿ ಮತ್ತು ಚಿತ್ರಮಂದಿರದಲ್ಲಿ ನೇರವಾಗಿ ತೆರೆಗೆ ತರಬೇಕೆಂದು ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಕೊರೊನಾ ಕಾರಣದಿಂದ ಚಿತ್ರಮಂದಿರ ಪೂರ್ಣ ಪ್ರಮಾಣದಲ್ಲಿ ಬಂದ್ ಆಗಿದ್ದು, ಒಟಿಟಿಯಲ್ಲಿ ಚಿತ್ರ ರಿಲೀಸ್ ಮಾಡಲಾಗಿದೆ. ಆದರೆ, ತೆರೆಕಂಡ ದಿನದಿಂದ ಚಿತ್ರಕ್ಕೆ ವಿಘ್ನಗಳು ಎದುರಾಗಿವೆ.
ಜೀ 5, ಜೀ ಪ್ಲೆಕ್ಸ್‌ನಲ್ಲಿ ಈಗ ರಾಧೆ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ರಿಲೀಸ್ ಕೆಲವೇ ಗಂಟೆಗಳಲ್ಲಿ ಸಿನಿಮಾ ಪೈರಸಿ ಆಗಿದೆ. ತಮಿಳ್ ರಾಕರ್ಸ್ ಸೇರಿದಂತೆ ಸಾಕಷ್ಟು ಪೈರಸಿ ವೆಬ್‌ಸೈಟ್‌ಗಳಲ್ಲಿ ಚಿತ್ರವನ್ನು ಸೋರಿಕೆ ಮಾಡಲಾಗಿದೆ. ಹಲವು ಟೆಲಿಗ್ರಾಮ್ ಚಾನೆಲ್‌ಗಳಲ್ಲೂ ಈ ಚಿತ್ರ ಫ್ರೀಯಾಗಿ ವೀಕ್ಷಣೆಗೆ ಸಿಗುತ್ತಿದೆ. ಸಿನಿಮಾ ರಿಲೀಸ್‌ಗೂ ಮೊದಲೇ ಪೈರಸಿ ಮಾಡದಂತೆ ಸಲ್ಮಾನ್ ಮನವಿ ಮಾಡಿದ್ದರು. 'ಒಂದು ಚಿತ್ರ ಮಾಡಲು ಸಾಕಷ್ಟು ಜನ ಶ್ರಮ ಪಡುತ್ತಾರೆ. ಆದರೆ, ಚಿತ್ರವನ್ನು ಪೈರಸಿ ಮಾಡಿ ಲೀಕ್ ಮಾಡಿದಾಗ ತುಂಬಾ ದುಃಖ ಆಗುತ್ತದೆ. ದಯವಿಟ್ಟು ಸರಿಯಾದ ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರ ವೀಕ್ಷಿಸಿ. ಮನರಂಜನೆಯಲ್ಲಿ ಪೈರಸಿ ಬೇಡ ಎಂಬ ಕಮಿಟ್‌ಮೆಂಟ್ ಈದ್ ಸಂದರ್ಭದಲ್ಲಿ ನನಗೆ ಪ್ರೇಕ್ಷಕರಿಂದ ಬೇಕು' ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು.