ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್ ಲೋಕದಲ್ಲಿ ಸ್ವಜನಪಕ್ಷಪಾತ (ನೆಪೋಟಿಸಂ) ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಇದರ ಪ್ರಭಾವವೀಗ ಮಹೇಶ್ ಭಟ್ ನಿರ್ದೇಶನದ 'ಸಡಕ್ 2' ಚಿತ್ರದ ಮೇಲೆ ಬೀರಿದೆ.
ಪಾಪ್ ತಾರೆ ಜಸ್ಟಿನ್ ಬೈಬರ್ ಅವರ 2010ರ 'ಬೇಬಿ' ಎಂಬ ಹಾಡು 11.6 ಮಿಲಿಯನ್ ಡಿಸ್ಲೈಕ್ ಪಡೆದಿದ್ದು, ಸ್ವತಃ ಯೂಟ್ಯೂಬ್ ಪೋಸ್ಟ್ ಮಾಡಿದ ವಿಡಿಯೋವೊಂದಕ್ಕೆ 18.2 ಮಿಲಿಯನ್ ಡಿಸ್ಲೈಕ್ಗಳ ಸುರಿಮಳೆಯಾಗಿತ್ತು. ಆಗಸ್ಟ್ 12 ರಂದು ಸಡಕ್ 2 ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಕೇವಲ ಐದೇ ದಿನಗಳಲ್ಲಿ 50 ಮಿಲಿಯನ್ ವೀವ್ಸ್ ದಾಟಿದೆ. ಆದರೆ ಒಂದು ಮಿಲಿಯನ್ ಕೂಡ ಲೈಕ್ ಗಳಿಸದೆ 10 ಮಿಲಿಯನ್ ಡಿಸ್ಲೈಕ್ಗಳು ಬಂದಿವೆ.
ಹೀಗಾಗಿ ಅತಿ ಹೆಚ್ಚು ಡಿಸ್ಲೈಕ್ ಪಡೆದ 'ವಿಶ್ವದ ಮೂರನೇ ಹಾಗೂ ಭಾರತದ ಮೊದಲ ಯುಟ್ಯೂಬ್ ವಿಡಿಯೋ' ಎಂಬ ಪಟ್ಟ ಸಡಕ್ 2 ಸಿನಿಮಾದ ಟ್ರೈಲರ್ಗೆ ದೊರೆತಿದೆ.
ಅಷ್ಟೇ ಅಲ್ಲದೇ ಟ್ರೈಲರ್ ಅನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಸ್ವಜನಪಕ್ಷಪಾತಕ್ಕೆ ಉದಾಹರಣೆಯಾಗಿ ನೋಡುತ್ತಿದ್ದಾರೆ. ಸುಶಾಂತ್ ಸಿಂಗ್ರ ಅಭಿಮಾನಿಗಳು ಈ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಸುಶಾಂತ್ ಸಾವಿನ ಬಳಿಕ ಜುಲೈನಲ್ಲಿ ನಟನ ಕುಟುಂಬವು ನೆಪೋಮೀಟರ್ ಎಂಬ ಆ್ಯಪ್ ಒಂದನ್ನು ಆರಂಭಿಸಿದ್ದು, ಶೇಕಡಾ 98 ರಷ್ಟು ಸ್ವಜನಪಕ್ಷಪಾತ ಎಂದು ಸಡಕ್-2 ಟ್ರೈಲರ್ಗೆ ರೇಟ್ ಮಾಡಿದೆ.
ನಿರ್ಮಾಪಕ ಮಹೇಶ್ ಭಟ್ ಅವರ ಚಿತ್ರದಲ್ಲಿ ಅವರ ಪುತ್ರಿಯರಾದ ಪೂಜಾ ಭಟ್ ಹಾಗೂ ಆಲಿಯಾ ಭಟ್ ನಟಿಸಿದ್ದಾರೆ. ಜೊತೆಗೆ ನಟ ಸಂಜಯ್ ದತ್ ಮತ್ತು ಆದಿತ್ಯ ರಾಯ್ ಕಪೂರ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದು, ಟ್ರೈಲರ್ಗೆ ಡಿಸ್ಲೈಕ್ ಮಾಡಿ ನೆಟ್ಟಿಗರು ಸಂಜಯ್ ದತ್ ಬಳಿ ಕ್ಷಮೆಯಾಚಿಸುತ್ತಿದ್ದಾರೆ.
ಸಡಕ್-2, ಇದು ಮಹೇಶ್ ಭಟ್ ನಿರ್ದೇಶನದ 1991ರ ಸಿನಿಮಾ 'ಸಡಕ್' ಚಿತ್ರದ ಮುಂದುವರಿದ ಭಾಗವಾಗಿದ್ದು, ಹಲವು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಚಿತ್ರ ಆಗಸ್ಟ್ 28 ರಂದು ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.