ಮುಂಬೈ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ವೇಟ್ ಲಿಫ್ಟರ್ ಮೀರಾಬಾಯಿ ಚನು ಐತಿಹಾಸಿಕ ಸಾಧನೆ ಮಾಡಿದ್ದಾರೆ. 49 ಕೆಜಿ ವಿಭಾಗ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿರುವ ಮಣಿಪುರದ ಅಥ್ಲೀಟ್ಸ್ ಇಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಭೇಟಿ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೀರಾಬಾಯಿ ಚನು, Thank you so much ಸಲ್ಮಾನ್ ಖಾನ್ ಸರ್. ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮನ್ನ ಭೇಟಿ ಮಾಡಿರುವುದು ಕನಸು ನನಸಾಗಿರುವಂತಿದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಲ್ಮಾನ್ ಖಾನ್, ನಿಮ್ಮನ್ನ ಭೇಟಿ ಮಾಡಿರುವುದು ಸಂತೋಷವಾಗಿದೆ. ಮುಂದಿನ ದಿನಗಳು ಶುಭಕರವಾಗಿರಲಿ ಎಂದಿದ್ದಾರೆ.
ಮುಂಬೈ ನಿವಾಸದಲ್ಲಿ ಸಲ್ಮಾನ್ ಖಾನ್ ಭೇಟಿ ಮಾಡಿರುವ ಮೀರಾಬಾಯಿ ಚುನು, ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಬೆಳ್ಳಿ ಪದಕ ವಿಜೇತೆ ಚನುಗೆ ಬಾಲಿವುಡ್ ನಟ ಅಭಿನಂದನೆ ಸಲ್ಲಿಸಿದರು. ಇದಕ್ಕೂ ಮುಂಚಿತವಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭೇಟಿ ಮಾಡಿದ್ದ ಮೀರಾಬಾಯಿ ಅವರೊಂದಿಗೆ ಕೆಲಹೊತ್ತು ಮಾತುಕತೆ ಸಹ ನಡೆಸಿದ್ದರು.
ಇದನ್ನೂ ಓದಿರಿ: ಮಣಿಪುರ to ಟೋಕಿಯೋ.. ಅದ್ಭುತ ಜರ್ನಿ ಎಂದು 'ಬೆಳ್ಳಿ ಚನು'ಪ್ರಶಂಸಿಸಿದ ಸಚಿನ್
ಇದೇ ವಿಚಾರವಾಗಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದ ಸಚಿನ್ ತೆಂಡೂಲ್ಕರ್, ನಿಮ್ಮನ್ನು ಇಂದು ಬೆಳಗ್ಗೆ ಭೇಟಿ ಮಾಡಿದ್ದು, ನಿಮ್ಮಷ್ಟೇ ನನಗೂ ಸಂತೋಷ ತಂದಿದೆ. ಮೀರಾಬಾಯಿ ಚನು, ಮಣಿಪುರದಿಂದ ಟೋಕಿಯೋವರೆಗೆ ನಿಮ್ಮ ಸ್ಪೂರ್ತಿಯುತ ಪಯಣದ ಬಗ್ಗೆ ಮಾತನಾಡಿದ್ದು, ಅದ್ಭುತವಾಗಿತ್ತು. ನೀವು ಮುಂದಿನ ದಿನಗಳಲ್ಲಿ ಹೋಗಬೇಕಾಗಿರುವ ಸ್ಥಳಗಳು(ಸ್ಪರ್ಧೆಗಳು) ಸಾಕಷ್ಟಿವೆ, ಕಠಿಣ ಶ್ರಮವನ್ನು ಮುಂದುವರಿಸಿ ಎಂದು ಸಚಿನ್ ಶುಭ ಹಾರೈಸಿದ್ದರು.