ಮುಂಬೈ (ಮಹಾರಾಷ್ಟ್ರ):ರವೀನಾ ಟಂಡನ್ ಸುಮಾರು ವರ್ಷಗಳ ನಂತರ ಸಿನಿಮಾ ಜಗತ್ತಿಗೆ ಮತ್ತೆ ಕಾಲಿಟ್ಟಿದ್ದಾರೆ. ಸಿನಿಮಾ ರಂಗ ಪ್ರತಿದಿನವೂ ಹೊಸತನ್ನು ಕಲಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರವೀನಾ ಅವರ ಮರು ಸಿನಿ ಪಯಣದ ಬಗ್ಗೆ ಕೇಳಿದಾಗ, 'ಸಿನಿಮಾ ಜರ್ನಿ ಅತ್ಯಂತ ದೀರ್ಘ ಹಾಗೂ ಮಹತ್ತರವಾಗಿದೆ, ಇದು ನನಗೆ ಸಾಕಷ್ಟು ಕಲಿಸಿದೆ. ನಾನು ತುಂಬಾ ಚಿಕ್ಕ ವಯಸ್ಸಿಗೆ ಸಿನಿ ಪ್ರಯಾಣ ಆರಂಭಿಸಿದೆ. ಈ ಪ್ರಯಾಣ ಸುಲಭವಾಗಿರಲಿಲ್ಲ. ಆದರೂ ಇದನ್ನು ನಾನು ತೊರೆದಿಲ್ಲ. ಗೌರವಯುತ ಸ್ಥಾನಕ್ಕಾಗಿ ಸಾಕಷ್ಟು ಶ್ರಮವಹಿಸಿದೆ. ಜೀವನ ಉತ್ತಮ ಶಿಕ್ಷಕನಾಗಿದ್ದು, ಪ್ರತಿದಿನ ನಮಗೆ ಹೊಸ ಪಾಠ ಕಲಿಸುತ್ತದೆ' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ರವೀನಾ ಸುಮಾರು 16 ವರ್ಷದವರಿದ್ದಾಗಲೇ ಬಾಲಿವುಡ್ಗೆ ಕಾಲಿಟ್ಟಿದ್ದರು. 1991ರಲ್ಲಿ ಸಲ್ಮಾನ್ ಖಾನ್ ಜೊತೆ ಪತ್ತರ್ ಕೆ ಫೂಲ್ ಚಿತ್ರದಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಂಡರು. ಅಲ್ಲಿಂದ ತಮ್ಮ ಸೋಲು ಗೆಲುವುಗಳನ್ನು ಕಂಡ ಅವರು, 'ನನ್ನ ಜೀವನದಲ್ಲಿ ಪಶ್ಚಾತ್ತಾಪವೇ ಇಲ್ಲ' ಅಂತಾ ಹೇಳ್ತಾರೆ. ಯಾವುದಕ್ಕೂ ಪಶ್ಚಾತ್ತಾಪ ಪಟ್ಟಿಲ್ಲ. ನನ್ನ ಜೀವನವನ್ನು ನಾನು ಪ್ರೀತಿಸುತ್ತೇನೆ. ಎಲ್ಲಾ ಮನುಷ್ಯರಂತೆ ನಾನೂ ಕೂಡ ತಪ್ಪುಗಳನ್ನು ಮಾಡುತ್ತೇನೆ. ಅವುಗಳಿಂದ ಸಾಕಷ್ಟು ಕಲಿತಿದ್ದೇನೆ ಎಂದು ತಮ್ಮ ಜೀವನಾನುಭವ ಹೇಳಿಕೊಂಡಿದ್ದಾರೆ.
ರವೀನಾ ಟಂಡನ್ ಈಗ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಹಾಗೂ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಾಯಕಿ ಶ್ರೀನಿಧಿ, ಬಾಲಿವುಡ್ನ ಸಂಜಯ್ ದತ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.