ನವದೆಹಲಿ:ಭಾರತೀಯ ಚಲನಚಿತ್ರಗಳಲ್ಲಿ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಹೇಗೆ ಬಿಂಬಿಸಲಾಗಿದೆ ಎಂಬುದರ ಕುರಿತು ಡಾ. ನರೇಂದ್ರ ಕೌಶಿಕ್ ಇಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಸಿನೆಮಾ ಜರ್ನಲಿಸ್ಟ್ ಆಗಿದ್ದ ನರೇಂದ್ರ ಕೌಶಿಕ್ ನಂತರ ಪ್ರಾಧ್ಯಾಪಕರಾದರು. ಗಾಂಧಿ ತತ್ವ ಸಿದ್ಧಾಂತಗಳ ವಿಷಯದಲ್ಲಿ ಡಾಕ್ಟರೇಟ್ ಮಾಡಿರುವ ಇವರು ಮೂರು ವರ್ಷಗಳ ಕಾಲ ಸಂಶೋಧನೆ ಮಾಡಿ ಈ ಕುರಿತಾದ ಪುಸ್ತಕ ಬರೆದಿದ್ದಾರೆ.
"90ರ ದಶಕದ ಅಂತ್ಯದಲ್ಲಿ The Story of My Experiments with Truth ಎಂಬ ಗಾಂಧೀಜಿಯವರ ಪುಸ್ತಕವೊಂದನ್ನು ದೆಹಲಿಯ ಗಾಂಧಿ ಭವನದಲ್ಲಿ ನಡೆದ ಗಾಂಧಿ ದರ್ಶನ ಕಾರ್ಯಕ್ರಮದಲ್ಲಿ ನನಗೆ ಉಡುಗೊರೆಯಾಗಿ ನೀಡಿದ್ದರು. ಆ ಪುಸ್ತಕ ಓದಲು ಆರಂಭಿಸಿದ ಕ್ಷಣದಿಂದಲೇ ನನ್ನಲ್ಲಿ ಗಾಂಧೀಜಿಯವರ ಕುರಿತು ಆಸಕ್ತಿ ಹೆಚ್ಚಾಗಲಾರಂಭಿಸಿತು. ಪುಸ್ತಕ ಓದಿ ಮುಗಿಸುವಷ್ಟರಲ್ಲಿ ನನ್ನ ಆತ್ಮ ಹಾಗೂ ಬುದ್ಧಿಗಳೆರಡೂ ಗಾಂಧೀಜಿಯವರ ಸಿದ್ಧಾಂತಗಳಿಂದ ಪ್ರಭಾವಿತವಾಗಿದ್ದವು." ಎನ್ನುತ್ತಾರೆ ಕೌಶಿಕ್.
ಭಾರತೀಯ ಸಿನೆಮಾಗಳಲ್ಲಿ ಗಾಂಧೀಜಿಯವರು ಎಷ್ಟು ಜೀವಂತವಾಗಿದ್ದಾರೆ ಎಂಬುದನ್ನು ಹುಡುಕುವ ಪ್ರಯತ್ನವೇ Mahatma Gandhi in cinema ಪುಸ್ತಕವಾಗಿದೆ. ಚಲನಚಿತ್ರ ಮಾಧ್ಯಮವನ್ನು ಪಾಪದ ತಂತ್ರಜ್ಞಾನ ಎಂದು ಮಹಾತ್ಮಾ ಗಾಂಧೀಜಿಯವರು ಹೇಳುತ್ತಿದ್ದರು ಎಂಬುದು ನಿಜ. ರಾಮಾಯಣ ಆಧರಿತ ರಾಮರಾಜ್ಯ ಎಂಬ ಒಂದೇ ಒಂದು ಸಿನೆಮಾವನ್ನು ಆಗಿನ ಕಾಲದಲ್ಲಿ ಗಾಂಧೀಜಿ ನೋಡಿದ್ದರು. ಸಿನೆಮಾಗಳು ಅನೈತಿಕತೆಯನ್ನು ಹೆಚ್ಚಿಸುತ್ತವೆ ಹಾಗೂ ಯುವಕರ ಮನಸ್ಸನ್ನು ಕೆಡಿಸುತ್ತವೆ ಎಂಬುದು ಗಾಂಧೀಜಿಯವರ ಅಭಿಪ್ರಾಯವಾಗಿತ್ತು ಎಂದು ಹೇಳುತ್ತಾರೆ ಕೌಶಿಕ್.
ಡಾ. ನರೇಂದ್ರ ಕೌಶಿಕ್ ಅವರ ಸಂದರ್ಶನದ ಸಂಪೂರ್ಣ ಪಠ್ಯ ಇಲ್ಲಿದೆ...
ಪ್ರಶ್ನೆ: ಭಾರತೀಯ ಸಿನೆಮಾ ರಂಗದಲ್ಲಿ ಗಾಂಧೀಜಿಯವರ ಸಿದ್ಧಾಂತಗಳನ್ನು ಹುಡುಕುವ ಪ್ರಯತ್ನ ಏಕೆ ಮಾಡುತ್ತಿರುವಿರಿ?
ಡಾ. ನರೇಂದ್ರ ಕೌಶಿಕ್: ಹಿಂದಿ ಸಿನೆಮಾಗಳಲ್ಲಿ ಗಾಂಧೀಜಿಯವರ ಜೀವನ ಕುರಿತು ಸಾಕಷ್ಟು ವಿಷಯಗಳನ್ನು ಬಿಂಬಿಸಲಾಗಿರುವುದು ಈ ಅಧ್ಯಯನ ಕೈಗೊಂಡ ಕೆಲವೇ ದಿನಗಳಲ್ಲಿ ನನ್ನ ಗಮನಕ್ಕೆ ಬಂದಿತ್ತು. ಆದರೆ ಈ ಎಲ್ಲ ಅಂಶಗಳು ಅಲ್ಲಲ್ಲಿ ಚಿಕ್ಕದಾಗಿ ಹೇಳಲ್ಪಟ್ಟಿದ್ದು, ಆಯಾ ಚಿತ್ರಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ಇಡೀ ಭಾರತೀಯ ಚಲನಚಿತ್ರರಂಗವು ಗಾಂಧೀಜಿಯವರನ್ನು ಹೇಗೆ ಬಿಂಬಿಸಿದೆ ಎಂಬುದರ ಕುರಿತಾಗಿ ಎಲ್ಲಿಯೂ ಸಮಗ್ರ ಮಾಹಿತಿ ಇಲ್ಲ. ಇದೇ ಕಾರಣದಿಂದ ನಾನು ಈ ಕುರಿತು ಆಳವಾದ ಅಧ್ಯಯನ ಮಾಡಲು ಪ್ರೇರಣೆ ಸಿಕ್ಕಂತಾಯಿತು.
ಪ್ರಶ್ನೆ: ನಿಮ್ಮ ಪುಸ್ತಕದ ಎರಡು ಪ್ರಮುಖ ಅಂಶಗಳ ಬಗ್ಗೆ ವಿವರಣೆ ನೀಡಿ.
ಡಾ. ನರೇಂದ್ರ ಕೌಶಿಕ್: ಗಾಂಧೀಜಿಯವರು ಸಿನೆಮಾ ರಂಗವನ್ನು ದ್ವೇಷಿಸುತ್ತಿದ್ದರೂ, 1960 ರ ದಶಕದವರೆಗೂ ಸಿನೆಮಾ ರಂಗವು ಅವರನ್ನು ಹಿಂಬಾಲಿಸಿದ್ದು ಒಂದು ವಿಚಿತ್ರ. ಸಿನಿಮಾಗಳೆಡೆಗಿನ ಗಾಂಧೀಜಿಯವರ ಸಿಟ್ಟನ್ನು ಕೇವಲ ಒಂದೇ ದೃಷ್ಟಾಂತವಾಗಿ ನೋಡುವಂತಿಲ್ಲ. ನಿಮ್ಮ ಅಜ್ಜ, ಅಜ್ಜಿಯಂದಿರ ಬಗ್ಗೆ ಜ್ಞಾಪಿಸಿಕೊಳ್ಳಿ. ಸಿನೆಮಾ ಮಾಡುವುದು ಜೋಕರ್ಗಳ ಕೆಲಸ ಎಂಬುದು ಆಗಿನ ಹಿರಿಯ ತಲೆಮಾರಿನ ಎಲ್ಲರ ಅಭಿಪ್ರಾಯವೂ ಆಗಿತ್ತು. ಈ ಎರಡು ವಿಷಯಗಳು ವಿಭಿನ್ನವಾಗಿದ್ದರೂ ಸಂಶೋಧಕನಿಗೆ ಇದಕ್ಕಿಂತ ಉತ್ತಮ ವಿಷಯ ಮತ್ತೇನಿದೆ ಹೇಳಿ.
ಪ್ರಶ್ನೆ: ಇಂಥದೊಂದು ಪುಸ್ತಕ ರಚಿಸಲು ನಿಮಗಿದ್ದ ಕಾರಣಗಳಾವುವು?
ಡಾ. ನರೇಂದ್ರ ಕೌಶಿಕ್: 1913 ರಿಂದ 2013 ರವರೆಗಿನ ಹಿಂದಿ ಸಿನಿಮಾ ರಂಗದ ಇತಿಹಾಸವನ್ನು ಬಿಚ್ಚಿಡುವ ಏಕೈಕ ಪುಸ್ತಕ ಇದಾಗಿದೆ. ಗಾಂಧೀಜಿಯವರು ಬದುಕಿದ್ದ ಕಾಲದಲ್ಲಿ ಅವರ ಸಿದ್ಧಾಂತಗಳು ಎಷ್ಟು ಪ್ರಸ್ತುತವಾಗಿದ್ದವೋ ಈಗಲೂ ಅವು ಅಷ್ಟೇ ಪ್ರಸ್ತುತವಾಗಿವೆ. ಸತ್ಯ, ಅಹಿಂಸೆ, ಧಾರ್ಮಿಕ ಸಮನ್ವಯತೆ, ಅಸ್ಪೃಶ್ಯತೆ ನಿವಾರಣೆ ಮತ್ತು ಸ್ವದೇಶಿ ಸಿದ್ಧಾಂತಗಳು ಎಂದಿಗೂ ಹಳತಾಗಲಾರವು.