ಮುಜಾಫರ್ಪುರ್/ಬಿಹಾರ: ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್, ಮುಖೇಶ್ ಭಟ್ ಹಾಗೂ ನಟಿ ಆಲಿಯಾ ಭಟ್ ವಿರುದ್ಧ ಇಂದು ವಕೀಲ ಸೋನು ಕುಮಾರ್ ಕೇಸ್ ದಾಖಲಿಸಿದ್ದಾರೆ.
ಜಿಲ್ಲಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲದಯಲ್ಲಿ ಈ ಮೂವರ ಮೇಲೆ ಸೋನುಕುಮಾರ್ ದೂರು ನೀಡಿದ್ದಾರೆ. 'ಸಡಕ್ 2' ಚಿತ್ರದ ಪೋಸ್ಟರ್ನಲ್ಲಿ ಕೈಲಾಸ ಪರ್ವತದ ಪೋಸ್ಟರ್ ಬಳಸುವ ಮೂಲಕ ಈ ಮೂವರು ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂದು ವಕೀಲ ಸೋನು ಕುಮಾರ್ ಆರೋಪಿಸಿದ್ದಾರೆ.
ಸೋನುಕುಮಾರ್ ಅವರು ಬಿಹಾರದ ಚಿತ್ರಕೂಟ್ ನಗರದ ಸದಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಎನ್ನಲಾಗಿದೆ. ಕೋರ್ಟ್ ಈ ಕೇಸ್ ವಿಚಾರಣೆಗೆ ಒಪ್ಪಿಕೊಂಡಿದೆ. ಜುಲೈ 8 ರಂದು ಈ ಕೇಸ್ ಸಂಬಂಧ ವಿಚಾರಣೆ ನಡೆಯಲಿದೆ ಎಂದು ಮತ್ತೊಬ್ಬ ವಕೀಲರಾದ ಪ್ರಿಯರಂಜನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ 'ಸಡಕ್ 2' ಚಿತ್ರದ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ನೆಟ್ಟಿಗರು ಮಹೇಶ್ ಭಟ್ ಅವರನ್ನು ಬಹಳ ಟ್ರೋಲ್ ಮಾಡಿದ್ದರು. ಪೋಸ್ಟರ್ನಲ್ಲಿ ಪರ್ವತಗಳು ಬಿಟ್ಟರೆ, ನಟ ಅಥವಾ ನಟಿಯರ ಪೋಟೋಗಳು ಇರಲಿಲ್ಲ. ಆಲಿಯಾ ಭಟ್ ಕೂಡಾ ಈ ಪೋಸ್ಟರ್ನ ಉದ್ದೇಶವೇನು ಎಂಬುದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿವರಿಸಿದ್ದರು. ಆದರೆ ಇದೀಗ ಅವರ ಮೇಲೆ ದೂರು ದಾಖಲಾಗಿದೆ. ಇದಕ್ಕೆ ಈ ಮೂವರು ಏನು ವಿವರಣೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.