ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಂದು 79ನೇ ವಸಂತಕ್ಕೆ ಕಾಲಿಟ್ಟಿದ್ದು, ಅನೇಕರು ವಿಶ್ ಮಾಡಿ ಅವರ ಆರೋಗ್ಯಕ್ಕಾಗಿ ಶುಭಾಶಯ ಕೋರಿದ್ದಾರೆ. ಈ ದಿನವೇ ಬಿಗ್ ಬಿ ಮಹತ್ವದ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಅವರ ಈ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದಲೂ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪಾನ್ ಮಸಾಲಾ ಬ್ರ್ಯಾಂಡ್ ಜಾಹೀರಾತುವೊಂದರಲ್ಲಿ ನಟ ಅಮಿತಾಭ್ ಬಚ್ಚನ್ ನಟನೆ ಮಾಡಿದ್ದರು. ಇದಕ್ಕೆ ತೀವ್ರವಾದ ಆಕ್ಷೇಪ ವ್ಯಕ್ತವಾಗಿದ್ದರಿಂದ ಇದೀಗ ಕಂಪನಿ ಜೊತೆಗಿನ ಒಪ್ಪಂದ ರದ್ಧು ಮಾಡಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಜೊತೆಗೆ ತಾವು ಪಡೆದುಕೊಂಡಿರುವ ಹಣ ಹಿಂತಿರುಗಿಸಲು ಮುಂದಾಗಿದ್ದಾರೆ. ಈ ಜಾಹೀರಾತಿನ ಪ್ರತಿನಿಧಿಯಾಗಿರುವ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಅವರ ಕಚೇರಿ ಪೋಸ್ಟ್ ಮಾಡಿದ್ದು, ಅಮಿತಾಭ್ ಬಚ್ಚನ್ ಅವರು ಇನ್ಮುಂದೆ ಪಾನ್ ಮಾಸಾಲಾ ಜಾಹೀರಾತುಗಳಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದೆ.