ಸಂಗೀತಕ್ಕೆ ಯಾವ ನೋವನ್ನಾದರೂ ಮರೆಸುವ ಶಕ್ತಿ ಇದೆ. ಸಂಗೀತ ಪುಟ್ಟ ಮಕ್ಕಳಿಂದ ವಯಸ್ಸಾದವರನ್ನೂ ಸೆಳೆಯುತ್ತದೆ. ಇದೀಗ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡಾ ವಾದ್ಯ ಸಂಗೀತಕ್ಕೆ ಮಾರುಹೋಗಿದ್ದಾರೆ. ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಯುವಕನೊಬ್ಬ ಮೌತ್ ಆರ್ಗನ್ ನುಡಿಸುವ ವಿಡಿಯೋಂದನ್ನು ಅಮಿತಾಬ್ ಬಚ್ಚನ್ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಬಹಳ ಅದ್ಭುತವಾಗಿದೆ. ಇದಕ್ಕೂ ಮುನ್ನ ನಾನು ಎಂದಿಗೂ ಮೌತ್ ಆರ್ಗನ್ನಿಂದ ಇಂತಹ ಸುಶ್ರಾವ್ಯವಾದ ಸಂಗೀತ ಕೇಳಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಕೊರೊನಾ ವೈರಸ್ ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮಿತಾಬ್ ಬಚ್ಚನ್ ಕೆಲವು ದಿನಗಳ ಹಿಂದೆ ಕೇರಳ ಯುವತಿಯೊಬ್ಬರ ಫ್ಯೂಷನ್ ಸಂಗೀತದ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು.
'ನನ್ನ ಸ್ನೇಹಿತರೊಬ್ಬರು ಈ ವಿಡಿಯೋವನ್ನು ನನಗೆ ಕಳಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನನಗೆ ನಿನ್ನ ಸಂಗೀತದಿಂದ ರಿಲ್ಯಾಕ್ಸ್ ಎನಿಸುತ್ತಿದೆ. ಕರ್ನಾಟಕ ಹಾಗೂ ವೆಸ್ಟರ್ನ್ ಎರಡನ್ನೂ ಜೊತೆ ಸೇರಿ ಹಾಡುತ್ತಿರುವ ಹಾಡು ಬಹಳ ಚೆನ್ನಾಗಿದೆ. ನೀನು ವಿಶೇಷ ಪ್ರತಿಭೆ. ದೇವರು ಒಳ್ಳೆಯದು ಮಾಡಲಿ' ಎಂದು ಬಿಗ್ ಬಿ ಆ ಯುವತಿಗೆ ಶುಭ ಹಾರೈಸಿದ್ದರು.
'ಕೊರೊನಾ ಪಾಸಿಟಿವ್ ಧೃಢವಾದಾಗಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಬಹಳ ದಿನಗಳಿಂದ ರೂಮ್ನಲ್ಲಿ ವೈದ್ಯರನ್ನು ಬಿಟ್ಟರೆ ಬೇರೆ ಯಾರ ಸಂಪರ್ಕವೂ ಇಲ್ಲದಿರುವುದು ಮನುಷ್ಯನ ಮಾನಸಿಕ ಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ನನಗೆ ಅರಿವಾಗಿದೆ. ಆದರೆ ಈ ವೇಳೆ ಸಂಗೀತ ಸ್ವಲ್ಪ ರಿಲ್ಯಾಕ್ಸ್ ಉಂಟುಮಾಡುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ಐಶ್ವರ್ಯ ರೈ ಹಾಗೂ ಆರಾಧ್ಯ ಇಬ್ಬರೂ ನಿನ್ನೆಯಷ್ಟೇ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ವಿಚಾರವನ್ನು ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.