ನವದೆಹಲಿ:ಸಣ್ಣ ಉಪಗ್ರಹಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೋ) ತನ್ನ ''ಸಣ್ಣ ಉಪಗ್ರಹ ಉಡಾವಣಾ ವಾಹಕ''ವನ್ನು (ಎಸ್‌ಎಸ್‌ಎಲ್‌ವಿ) ಖಾಸಗಿ ವಲಯಕ್ಕೆ ವರ್ಗಾಯಿಸಲಾಗುವುದಾಗಿ ಸೋಮವಾರ ಪ್ರಕಟಿಸಿದೆ. ಎರಡು ಅಭಿವೃದ್ಧಿ ಹೊಂದಿರುವ ಎಸ್ಎಸ್ಎಲ್ವಿಯು, 500 ಕೆಜಿ ತೂಕದ ಉಪಗ್ರಹಗಳನ್ನು ಭೂಮಿಯ ಕಕ್ಷೆಯಲ್ಲಿ ಸೇರಿಸುವ ಬೇಡಿಕೆಯ ಸೇವೆಗಳನ್ನು ಒದಗಿಸಲು ಮುಂದಾಗಿದೆ.
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದೇನು?:"ನಾವು ನಮ್ಮದೇ ಆದ ಎಸ್‌ಎಸ್‌ಎಲ್‌ವಿ ಅನ್ನು ನಿರ್ಮಿಸಿದ್ದೇವೆ. ಅದನ್ನು ಉದ್ಯಮಕ್ಕೆ ವರ್ಗಾಯಿಸಲಾಗುವುದು ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲಾಗುವುದು" ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು, ಎಸ್ಐಎ ಇಂಡಿಯಾ ಆಯೋಜಿಸಿದ್ದ ಇಂಡಿಯಾ ಸ್ಪೇಸ್ ಕಾಂಗ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು. ಮಿನಿ ರಾಕೆಟ್ ಅನ್ನು ಉದ್ಯಮಕ್ಕೆ ವರ್ಗಾಯಿಸಲು ಬಿಡ್ಡಿಂಗ್ ಮಾರ್ಗವನ್ನು ಆಯ್ಕೆ ಮಾಡಲು ಬಾಹ್ಯಾಕಾಶ ಸಂಸ್ಥೆ ನಿರ್ಧರಿಸಿದೆ ಎಂದರು.
ಎಸ್‌ಎಸ್‌ಎಲ್‌ವಿ ಇಸ್ರೋ ಅಭಿವೃದ್ಧಿಪಡಿಸಿದ ಆರನೇ ಉಡಾವಣಾ ವಾಹಕವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಎರಡು ಅಭಿವೃದ್ಧಿ ಪಡಿಸಲಾದ ವಾಹಕಗಳು ಹಾರಾಟ ನಡೆಸಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಎಸ್‌ಎಸ್‌ಎಲ್‌ವಿಯ ಮೊದಲ ಹಾರಾಟವು ಎರಡನೇ ಹಂತದ ಬೇರ್ಪಡಿಕೆ ಸಮಯದಲ್ಲಿ ಎಕ್ವಿಪ್‌ಮೆಂಟ್ ಬೇ ಡೆಕ್‌ನಲ್ಲಿ ಅಲ್ಪಾವಧಿಗೆ ಕಂಪನ ಅಡಚಣೆಯಿಂದಾಗಿ ವಿಫಲವಾಗಿತ್ತು. ಈ ದೋಷದ ಬಗ್ಗೆ ಆಳವಾದ ವಿಶ್ಲೇಷಣೆಯನ್ನು ನಡೆಸಿದ ನಂತರ, ಇಸ್ರೋ ಸರಿಪಡಿಸುವ ಕ್ರಮಗಳನ್ನು ಕೈಗೊಂಡಿತ್ತು. ಫೆಬ್ರವರಿಯಲ್ಲಿ ಎಸ್‌ಎಸ್‌ಎಲ್‌ವಿಯ ಯಶಸ್ವಿ ಉಡಾವಣೆ ನಡೆಸಿತು. ಎಸ್‌ಎಸ್‌ಎಲ್‌ವಿ ಇಸ್ರೋದ ಇಒಎಸ್-07 ಉಪಗ್ರಹ, ಯುಎಸ್ ಮೂಲದ ಸಂಸ್ಥೆ ಅಂತರಿಸ್ನ ಜಾನಸ್-1 ಹಾಗೂ ಚೆನ್ನೈ ಮೂಲದ ಬಾಹ್ಯಾಕಾಶ ಸ್ಟಾರ್ಟ್ ಅಪ್ ಸ್ಪೇಸ್ ಕಿಡ್ಜ್‌ನ ಆಜಾದಿಸ್ಯಾಟ್-2 ಉಪಗ್ರಹಗಳನ್ನು 450 ಕಿ.ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಿತು.