ನವದೆಹಲಿ:ಏವಿಯನ್ ಇನ್‌ಫ್ಲುಯೆಂಜಾ ಎ (ಎಚ್3ಎನ್8) ವೈರಸ್‌ನಿಂದ ಬುಧವಾರ ಚೀನಾದಲ್ಲಿ ಮೊದಲ ಸಾವು ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಸುದ್ದಿ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. 56 ವರ್ಷದ ಮಹಿಳೆಯೊಬ್ಬರು H3N8 ವೈರಸ್ ಸೋಂಕಿಗೆ ಒಳಗಾಗಿದ್ದರು ಎಂದು ಚೀನಾ ಮಾರ್ಚ್ 27 ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿತ್ತು.
ಫೆಬ್ರವರಿ 22 ರಂದು ಗುವಾಂಗ್‌ಡಾಂಗ್ ಪ್ರಾಂತ್ಯದ ಮಹಿಳೆ ವೈರಸ್‌ನಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅಸ್ವಸ್ಥ ಮಹಿಳೆಯನ್ನು ಮಾರ್ಚ್ 3 ರಂದು ತೀವ್ರ ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಈ ಮಹಿಳೆ ಮಾರ್ಚ್ 16 ರಂದು ಸಾವನ್ನಪ್ಪಿದ್ದಾಳೆ ಎಂದು ಸ್ಪಷ್ಟಪಡಿಸಿದೆ.
ಸೋಂಕಿತ ಕೋಳಿಗಳ ಸಂಪರ್ಕಕ್ಕೆ ಬಂದ ಮಹಿಳೆ: ಮಹಿಳೆ ಸೋಂಕಿತ ಕೋಳಿಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಎಂದು ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಅನಾರೋಗ್ಯ ಪ್ರಾರಂಭವಾಗುವ ಮೊದಲು ಮಹಿಳೆ ಕೋಳಿಯ ಸಂಪರ್ಕಕ್ಕೆ ಬಂದಿದ್ದ ಹಿನ್ನೆಲೆ ಹೊಂದಿದ್ದಳು. ಆಕೆಯ ಮನೆಯ ಸುತ್ತ ಕಾಡು ಪಕ್ಷಿಗಳು ವಾಸಿಸುತ್ತಿದ್ದವು ಎಂದು ಸಂಸ್ಥೆ ತಿಳಿಸಿದೆ. ಘಟನೆಯ ಪ್ರಾಥಮಿಕ ಸೋಂಕುಶಾಸ್ತ್ರದ ತನಿಖೆಗಳು ಕೋಳಿ ಮಾರುಕಟ್ಟೆಗಳ ಸಂಪರ್ಕದಲ್ಲಿದಿದ್ದರಿಂದ ಸೋಂಕಿಗೆ ಕಾರಣವಾಗಿರಬಹುದು ಎಂದು ತಿಳಿದುಬಂದಿರುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕದಿಂದ ಬೇರಾವುದೇ ಪ್ರಕರಣಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಪಾರ್ಕಿನ್ಸನ್ ಕಾಯಿಲೆಗೆ ತುತ್ತಾದ ಪ್ರಮುಖ ವ್ಯಕ್ತಿಗಳಿವರು..: ರೋಗದ ಕುರಿತು ಬೇಕಿದೆ ಅರಿವು