ಸ್ಯಾನ್ ಫ್ರಾನ್ಸಿಸ್ಕೊ (ಅಮೆರಿಕ) :32 ಜನರೊಂದಿಗೆ ವಿಡಿಯೋ ಕಾಲಿಂಗ್ ಮಾಡಬಹುದಾದ ವೈಶಿಷ್ಟ್ಯವನ್ನು ವಾಟ್ಸ್ಆ್ಯಪ್ ಪರಿಚಯಿಸುತ್ತಿದೆ. ಸದ್ಯಕ್ಕೆ ಈ ವೈಶಿಷ್ಟ್ಯವನ್ನು ವಿಂಡೋಸ್ ಬೀಟಾ ಬಳಕೆದಾರರಿಗೆ ವಾಟ್ಸ್ ಆ್ಯಪ್ ಬಿಡುಗಡೆ ಮಾಡಲಾರಂಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ತಮ್ಮ ಗ್ರೂಪ್ಗಳಿಗೆ ಕಾಲ್ ಮಾಡುವಂತೆ ಕೇಳಿ ಬೀಟಾ ಯೂಸರ್ಗಳಿಗೆ ವಾಟ್ಸ್ ಆ್ಯಪ್ ಮೆಸೇಜ್ ಕಳುಹಿಸುತ್ತಿದೆ.
ಈ ಹಿಂದೆ ವಿಂಡೋಸ್ ಪ್ಲಾಟ್ಫಾರ್ಮ್ನ ವಾಟ್ಸ್ ಆ್ಯಪ್ನಲ್ಲಿ 32 ಜನರೊಂದಿಗೆ ಆಡಿಯೋ ಕಾಲಿಂಗ್ ಮಾಡುವ ವೈಶಿಷ್ಟ್ಯ ಮಾತ್ರ ಇತ್ತು. ಆದರೆ, ಈಗ ಹೊಸ ಅಪ್ಡೇಟ್ನೊಂದಿಗೆ ಬೀಟಾ ಯೂಸರ್ಗಳು 32 ಜನರೊಂದಿಗೆ ಏಕಕಾಲಕ್ಕೆ ವಿಡಿಯೋ ಕಾಲ್ ಮಾಡಬಹುದು. ವಿಂಡೋಸ್ ಅಪ್‌ಡೇಟ್‌ಗಾಗಿ ಇತ್ತೀಚಿನ ವಾಟ್ಸ್ಆ್ಯಪ್ ಬೀಟಾವನ್ನು ಹೊಂದಿರುವ ಕೆಲ ಬೀಟಾ ಪರೀಕ್ಷಕರಿಗೆ ಹೊಸ ವೈಶಿಷ್ಟ್ಯವು ಪ್ರಸ್ತುತ ಲಭ್ಯವಿದೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ, ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಮತ್ತು ಐಒಎಸ್‌ಗಾಗಿ ಘೋಷಿಸಿದ್ದರು. ಈ ತಿಂಗಳ ಆರಂಭದಲ್ಲಿ, ವಿಂಡೋಸ್‌ನಲ್ಲಿ ಕೆಲವು ಬೀಟಾ ಪರೀಕ್ಷಕರಿಗೆ ವಿಡಿಯೋ ಕರೆಗಳಿಗಾಗಿ ಸ್ಕ್ರೀನ್- ಶೇರಿಂಗ್ ವೈಶಿಷ್ಟ್ಯವನ್ನು ವಾಟ್ಸ್ ಆ್ಯಪ್ ಹೊರತರುತ್ತಿದೆ ಎಂದು ವರದಿಯಾಗಿದೆ. ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ವಿಡಿಯೋ ಕರೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೊಂದಿಗೆ ನಿರ್ದಿಷ್ಟ ವಿಂಡೋ ಅಥವಾ ಸಂಪೂರ್ಣ ಸ್ಕ್ರೀನ್ ಹಂಚಿಕೊಳ್ಳುವ ಆಯ್ಕೆಯನ್ನು ಪಡೆಯುತ್ತಾರೆ.
ಪಿನ್ ಮೆಸೇಜ್ಗಳಿಗೆ ಟೈಮರ್ ಸೆಟಿಂಗ್: ವಾಟ್ಸ್ ಆ್ಯಪ್ ಮತ್ತೊಂದು ವೈಶಿಷ್ಟ್ಯವನ್ನು ಬಳಕೆದಾರರಿಗಾಗಿ ಹೊರತಂದಿದೆ. ಸಂಭಾಷಣೆಗಳಲ್ಲಿನ ಪಿನ್ಡ್ ಮೆಸೇಜುಗಳಿಗೆ ಟೈಮರ್ ಸೆಟ್ ಮಾಡಬಹುದಾದ ವೈಶಿಷ್ಟ್ಯ ಇದಾಗಿದೆ. ಚಾಟ್ ಒಂದರಲ್ಲಿ ಪಿನ್ ಆಗಿರುವ ಮೆಸೇಜು ಹಾಗೆ ಎಷ್ಟು ಅವಧಿಯವರೆಗೆ ಇರಬೇಕು ಎಂಬುದನ್ನು ನೀವು ಈಗ ಸೆಟ್ ಮಾಡಬಹುದು. ಸದ್ಯಕ್ಕೆ ಈ ವೈಶಿಷ್ಟ್ಯವನ್ನು ಆ್ಯಂಡ್ರಾಯ್ಡ್ ವಾಟ್ಸ್ ಆ್ಯಪ್ ಬೀಟಾ ಟೆಸ್ಟರ್ಗಳಿಗೆ ನೀಡಲಾಗುತ್ತಿದೆ.
ಮೆಸೇಜ್ ಪಿನ್ ಅವಧಿ ವೈಶಿಷ್ಟ್ಯವು ಸಮಯ ಮುಗಿದ ನಂತರ ಪಿನ್ ಆಗಿರುವ ಮೆಸೇಜನ್ನು ತಾನಾಗಿಯೇ ಅನ್ಪಿನ್ ಮಾಡಲಿದೆ. ಸದ್ಯಕ್ಕೆ ಬಳಕೆದಾರರು 24 ಗಂಟೆ, 7 ದಿನ ಮತ್ತು 30 ದಿನ ಹೀಗೆ ಮೂರು ಅವಧಿಗಾಗಿ ಅನ್ ಪಿನ್ ಸಮಯ ಸೆಟ್ ಮಾಡಬಹುದು. ಬರುವ ದಿನಗಳಲ್ಲಿ ಇದಕ್ಕೆ ಮತ್ತಷ್ಟು ಆಯ್ಕೆಗಳನ್ನು ವಾಟ್ಸ್ ಆ್ಯಪ್ ಸೇರಿಸಲಿದೆ ಎಂದು ವರದಿಯಾಗಿದೆ.
ಪಿಂಕ್ ವಾಟ್ಸ್ ಆ್ಯಪ್ ವಂಚನೆ: 'ವಾಟ್ಸ್ ಆ್ಯಪ್ ಪಿಂಕ್' ಎಂಬ ಅಪ್‌ಡೇಟ್ ಬಂದಿದೆ ಎಂಬ ಸಂದೇಶಗಳು ಹಲವಾರು ಬಳಕೆದಾರರಿಗೆ ಬರುತ್ತಿವೆ. ಆದರೆ ವಾಸ್ತವದಲ್ಲಿ ಇದು ವಾಟ್ಸ್ ಆ್ಯಪ್ ಅಲ್ಲವೇ ಅಲ್ಲ.. ವಾಟ್ಸ್ ಆ್ಯಪ್ ಅನ್ನೇ ಹೋಲುವ ನಕಲಿ ಆ್ಯಪ್ ಇದಾಗಿದೆ. ವಾಟ್ಸ್ ಪಿಂಕ್ ಹೆಸರಿನಲ್ಲಿ ಲಿಂಕ್ ಕಳುಹಿಸಿ ಅದನ್ನು ಕ್ಲಿಕ್ ಮಾಡುವಂತೆ ಮತ್ತು ಡೌನ್ಲೋಡ್ ಮಾಡುವಂತೆ ಬಳಕೆದಾರರಿಗೆ ಆಮಿಷ ಒಡ್ಡಲಾಗುತ್ತದೆ. ಇದನ್ನು ಡೌನ್ಲೋಡ್ ಮಾಡಿಕೊಂಡರೆ ಅದರ ಮೂಲಕ ಹ್ಯಾಕರ್ಗಳು ಬಳಕೆದಾರರ ಪೋನ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದಾಗಿದೆ. ಹೀಗಾಗಿ ಪಿಂಕ್ ವಾಟ್ಸ್ ಆ್ಯಪ್ ಬಗ್ಗೆ ಜಾಗರೂಕರಾಗಿರಬೇಕು ಎಂದು ಮುಂಬೈ ಪೊಲೀಸರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : AIನಿಂದ ಉದ್ಯೋಗ ನಷ್ಟ ತಾತ್ಕಾಲಿಕ, ಹೊಸ ಉದ್ಯೋಗ ಸೃಷ್ಟಿ ಖಚಿತ: ಮಾಜಿ ಎಸ್ಬಿಐ ಅಧ್ಯಕ್ಷೆ