ಸ್ಯಾನ್ ಫ್ರಾನ್ಸಿಸ್ಕೋ: ಈ ವಾರದ ಆರಂಭದಲ್ಲಿ ಬಿಡುಗಡೆಯಾದ ಹೊಸ ಅಪ್ಡೇಟ್ ಇನ್ಸ್ಟಾಲ್ ಮಾಡಿದ ನಂತರ ಕೆಲ ವಿಂಡೋಸ್ 11 ಪಿಸಿಗಳಲ್ಲಿ "UNSUPPORTED_PROCESSOR" ದೋಷ ಕಾಣಿಸಿಕೊಂಡಿದೆ. UNSUPPORTED_PROCESSOR ಸಂದೇಶದೊಂದಿಗೆ ಕಾಣಿಸುವ ಬ್ಲೂ ಸ್ಕ್ರೀನ್ ಆಫ್ ಡೆತ್ (ಬಿಎಸ್ಒಡಿ) ವರದಿಗಳ ಬಗ್ಗೆ ತನಿಖೆ ನಡೆಸುವುದಾಗಿ ಮೈಕ್ರೋಸಾಫ್ಟ್ ಹೇಳಿದೆ.
ಹೊಸ ಅಪ್ಡೇಟ್ ಸಾಮಾನ್ಯ ಮಾಸಿಕ ಪರಿಹಾರಗಳನ್ನು ಒಳಗೊಂಡಿದೆ, ಆದರೆ ಇದು ಕೆಲವು ಎಂಎಸ್ಐ ಮದರ್ಬೋರ್ಡ್ಗಳಲ್ಲಿ ದೋಷ ಉಂಟು ಮಾಡುತ್ತಿದೆ ಎಂದು ವರದಿಗಳು ಹೇಳಿವೆ. "ಇದು ಮೈಕ್ರೋಸಾಫ್ಟ್ನಿಂದ ಎದುರಾದ ಸಮಸ್ಯೆಯೇ ಎಂಬುದನ್ನು ನಿರ್ಧರಿಸಲು ನಾವು ಪ್ರಸ್ತುತ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿ ಲಭ್ಯವಾದ ನಂತರ ನಾವು ಈ ಬಗ್ಗೆ ಅಪ್ಡೇಟ್ ನೀಡುತ್ತೇವೆ" ಎಂದು ಮೈಕ್ರೋಸಾಫ್ಟ್ನ ವಿಂಡೋಸ್ ಹೆಲ್ತ್ ಸೆಂಟರ್ನ ನೋಟ್ನಲ್ಲಿ ತಿಳಿಸಲಾಗಿದೆ.
ಯಾವುದೋ ಗಂಭೀರ ದೋಷದ ಕಾರಣದಿಂದ ವಿಂಡೋಸ್ ಶಟ್ಡೌನ್ ಆಗುವುದು ಅಥವಾ ಅನಿರೀಕ್ಷಿತವಾಗಿ ರಿಸ್ಟಾರ್ಟ್ ಆಗಲು ಆರಂಭಿಸಿದರೆ ಆವಾಗ ಬ್ಲೂ ಸ್ಕ್ರೀನ್ ದೋಷ ಕಾಣಿಸಿಕೊಳ್ಳುತ್ತದೆ. ಇದನ್ನು ಕೆಲ ಬಾರಿ ಬ್ಲ್ಯಾಕ್ ಸ್ಕ್ರೀನ್ ದೋಷ ಅಥವಾ STOP code ದೋಷ ಎಂದೂ ಕರೆಯಲಾಗುತ್ತದೆ. "ನಿಮ್ಮ ಕಂಪ್ಯೂಟರ್ ಗೆ ಹಾನಿಯಾಗದಂತೆ ತಡೆಯಲು ವಿಂಡೋಸ್ ಅನ್ನು ಶಟ್ಡೌನ್ ಮಾಡಲಾಗಿದೆ" ಎಂಬ ಸಂದೇಶ ಅಥವಾ ಇದೇ ರೀತಿಯ ಸಂದೇಶ ಕಾಣಿಸಿಕೊಳ್ಳುತ್ತಿದೆ ಎಂದು ಮೈಕ್ರೊಸಾಫ್ಟ್ ಹೇಳಿದೆ.
ಕಂಪನಿಯ ಪ್ರಕಾರ, ಈ ದೋಷಗಳು ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಸಮಸ್ಯೆಗಳಿಂದಲೂ ಉಂಟಾಗಬಹುದು. ಇದಲ್ಲದೆ, ಅಪ್ಡೇಟ್ ಅನ್ನು ಇನ್ಸ್ಟಾಲ್ ಮಾಡಿದ ನಂತರ ಹಲವಾರು ರೆಡ್ಡಿಟ್ ಬಳಕೆದಾರರು ಅದೇ ರೀತಿಯ ಬಿಎಸ್ಒಡಿ ದೋಷವನ್ನು ವರದಿ ಮಾಡಿದ್ದಾರೆ. ಅವರೆಲ್ಲರೂ ಇತ್ತೀಚಿನ ಬಯೋಸ್ ಅಪ್ಡೇಟ್ಗಳೊಂದಿಗೆ ಎಂಎಸ್ಐ ಮದರ್ಬೋರ್ಡ್ಗಳೊಂದಿಗೆ ಇಂಟೆಲ್ ಸಿಸ್ಟಮ್ಗಳನ್ನು ಹೊಂದಿದ ಕಂಪ್ಯೂಟರ್ಗಳನ್ನು ಬಳಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.