ನವದೆಹಲಿ: ಎಲೋನ್ ಮಸ್ಕ್ ಈಗಲೂ ಟ್ವಿಟರ್ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ. ಸೇಲ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಹಲವಾರು ನೌಕರರನ್ನು ಕಳೆದ ವಾರವಷ್ಟೇ ಹೊರಹಾಕಲಾಗಿತ್ತು. ಮಸ್ಕ್ಗೆ ನೇರವಾಗಿ ರಿಪೋರ್ಟಿಂಗ್ ಮಾಡುತ್ತಿದ್ದ ಓರ್ನ ನೌಕರನ್ನೂ ಹೀಗೆ ಹೊರಹಾಕಿದ ನೌಕರರಲ್ಲಿ ಸೇರಿದ್ದಾರೆ. ಇವರು ಟ್ವಿಟರ್ನ ಜಾಹೀರಾತು ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಮಸ್ಕ್ ಕಡಿಮೆಯೆಂದರೂ ಮೂರು ಹಂತಗಳಲ್ಲಿ ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನಷ್ಟು ನೌಕರರನ್ನು ವಜಾ ಮಾಡುವುದಿಲ್ಲ ಎಂದು ನವೆಂಬರ್‌ನಲ್ಲಿ ಮಸ್ಕ್ ವಾಗ್ದಾನ ಮಾಡಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಸ್ಕ್ ನಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮೊದಲ ಹಂತದ ಕಡಿತದಲ್ಲಿ ಟ್ವಿಟರ್ 7,500 ಉದ್ಯೋಗಿಗಳನ್ನು ವಜಾ ಮಾಡಿತ್ತು.
ಟ್ವಿಟರ್ ಈಗ ಎಂಜಿನಿಯರಿಂಗ್ ಮತ್ತು ಸೇಲ್ಸ್ ವಿಭಾಗದಲ್ಲಿ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳುತ್ತಿದೆ ಎಂದು ರಿಪೋರ್ಟಿಂಗ್ ಉದ್ಯೋಗಿಗಳ ಜೊತೆ ನಡೆಸಿದ ಸಭೆಯಲ್ಲಿ ಮಸ್ಕ್ ಹೇಳಿದ್ದರು. ತಮಗೆ ಗೊತ್ತಿರುವವರನ್ನು ಕಂಪನಿಗೆ ರೆಫರ್ ಮಾಡುವಂತೆಯೂ ಅವರು ಹೇಳಿದ್ದರು. ಇಷ್ಟಾದರೂ ಮಸ್ಕ್ ಆಗಾಗ ಉದ್ಯೋಗಿಗಳನ್ನು ವಜಾ ಮಾಡುತ್ತಿರುವುದು ಮಾತ್ರ ಸತ್ಯ. ಭಾರತದಲ್ಲಿನ ತನ್ನ ಮೂರರ ಪೈಕಿ ಎರಡು ಕಚೇರಿಗಳನ್ನು ಟ್ವಿಟರ್ ಈಗಾಗಲೇ ಮುಚ್ಚಿದೆ. ಇಲ್ಲಿ ಉಳಿಸಿಕೊಳ್ಳಲಾದ ಕೆಲವೇ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಟ್ವಿಟರ್ ನವದೆಹಲಿ ಮತ್ತು ಮುಂಬೈನಲ್ಲಿ ತನ್ನ ಕಚೇರಿಗಳನ್ನು ಮುಚ್ಚಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಮಸ್ಕ್ ಭಾರತದಲ್ಲಿನ ಶೇ 90 ಕ್ಕಿಂತ ಹೆಚ್ಚು (ಸುಮಾರು 200) ಉದ್ಯೋಗಿಗಳನ್ನು ವಜಾಗೊಳಿಸಿದ್ದರು.