ನವದೆಹಲಿ: ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನ ಈಗ ಬಹುತೇಕ ಎಲ್ಲ ವಲಯಗಳಿಗೂ ವ್ಯಾಪಿಸುತ್ತಿದೆ. ಆದರೆ ಈಗಲೂ ದೇಶದ ಶೇ 49ರಷ್ಟು ಶಿಕ್ಷಕರು ಇದರ ಬಗ್ಗೆ ಪರಿಚಿತರಾಗಿಲ್ಲ ಹಾಗೂ ಇದರ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ಶಕ್ತರಾಗಿಲ್ಲ ಎಂದು ಹೊಸ ವರದಿಯೊಂದು ಹೇಳಿದೆ. ಎಐ ಆಧರಿತ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳಿಗೆ ಕಲಿಸುವ ನಿಟ್ಟಿನಲ್ಲಿ ಮೊದಲು ಶಿಕ್ಷಕರಿಗೆ ಇದರ ಬಗ್ಗೆ ವ್ಯಾಪಕ ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ವರದಿ ತಿಳಿಸಿದೆ.
ಶಿಕ್ಷಣ ವಲಯದಲ್ಲಿ ಬದಲಾವಣೆ ತರುವುದಕ್ಕಾಗಿ ಎಐ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸರ್ಕಾರಗಳು ಶಾಲೆಗಳಿಗೆ ಬೆಂಬಲ ನೀಡಬೇಕು ಎಂದು ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ (ಒಯುಪಿ) ವರದಿ ಹೇಳಿದೆ. ಶಾಲೆಗಳಲ್ಲಿ ಎಐ ಬಳಕೆಯನ್ನು ಬೆಂಬಲಿಸುವಂತೆ ಮತ್ತು ಶಿಕ್ಷಣದಲ್ಲಿ ಗುಣಮಟ್ಟದ ಸಂಪನ್ಮೂಲಗಳಿಗೆ ಆದ್ಯತೆ ನೀಡುವಂತೆ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಣ ವಲಯದ ನಾಯಕರಿಗೆ ಈ ವರದಿ ಶಿಫಾರಸುಗಳನ್ನು ಮಾಡಿದೆ.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಎಐ ಯುಗಕ್ಕೆ ಹೊಂದಿಕೊಳ್ಳದಿದ್ದರೆ, ವಿದ್ಯಾರ್ಥಿಗಳು ಅದರ ಅನುಷ್ಠಾನದಲ್ಲಿ ಅಸಮಾನತೆಯನ್ನು ಎದುರಿಸಬಹುದು ಮತ್ತು ಭವಿಷ್ಯದಲ್ಲಿ ವಿಶಾಲ ಅರಿವಿನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದನ್ನು ಇದು ತಡೆಯುವ ಅಪಾಯವಿದೆ. ಅಲ್ಲದೆ ಇದು ಕಲಿಕೆಯ ಫಲಿತಾಂಶಗಳ ಮೇಲೆಯೂ ಗಮನಾರ್ಹ ಪರಿಣಾಮ ಬೀರುತ್ತದೆ.
"ಶಿಕ್ಷಣದಲ್ಲಿ ಎಐ ಪಾತ್ರದ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಶಾವಾದಿಗಳಾಗಿದ್ದಾರೆ ಮತ್ತು ಇದು ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರುವುದನ್ನು ನಮ್ಮ ಸಂಶೋಧನೆ ತೋರಿಸುತ್ತದೆ. ಆದಾಗ್ಯೂ, ಈ ಮುಂದುವರಿದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಉತ್ತರಿಸದ ಪ್ರಶ್ನೆಗಳು ಮತ್ತು ಸಂಭಾವ್ಯ ಅಪಾಯಗಳಿವೆ "ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಒಯುಪಿ ವಿಭಾಗದ ಸಿಇಒ ನಿಗೆಲ್ ಪೋರ್ಟ್ವುಡ್ ಹೇಳಿದರು.
ಎಐನ ಅಪಾಯಗಳು ಮತ್ತು ಪರಿಣಾಮಗಳ ಬಗ್ಗೆ ಸರಿಯಾದ ಪರಿಗಣನೆ ಅಥವಾ ಅದನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾರ್ಗದರ್ಶನವಿಲ್ಲದೆ ಅದನ್ನು ಬಳಸಿದಲ್ಲಿ ಬೋಧನೆ ಮತ್ತು ಕಲಿಕೆಯ ಮಾನದಂಡಗಳ ಮೇಲೆ ಪರಿಣಾಮ ಬೀರಬಹುದು ಎಂದು ಆಕ್ಸ್ಫರ್ಡ್ ಎಚ್ಚರಿಸಿದೆ. ಯುಕೆ, ಹಾಂಗ್ ಕಾಂಗ್, ಜಪಾನ್, ಇಟಲಿ, ಆಸ್ಟ್ರೇಲಿಯಾ, ಯುಎಇ ಮತ್ತು ಇತರ ದೇಶಗಳಲ್ಲಿ ಒಯುಪಿಯ ಜಾಗತಿಕ ಶಿಕ್ಷಕರ ಜಾಲದ ಸಮೀಕ್ಷೆಯ ದತ್ತಾಂಶದೊಂದಿಗೆ ಈ ವಿಷಯದ ಬಗ್ಗೆ ಅಸ್ತಿತ್ವದಲ್ಲಿರುವ ಸಂಶೋಧನೆಯನ್ನು ವರದಿ ಒಳಗೊಂಡಿದೆ. ಎಐ ಕುರಿತ ಸಂಬಂಧಿತ ಒಳನೋಟಗಳು ಮತ್ತು ಸಂಶೋಧನೆಯನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸುವುದರಿಂದ ಸುಮಾರು 88 ಪ್ರತಿಶತದಷ್ಟು ಶಿಕ್ಷಕರಿಗೆ ಪ್ರಯೋಜನವಾಗಲಿದೆ ಎಂದು ಸಂಶೋಧನೆಗಳು ತೋರಿಸಿವೆ.
ಇದನ್ನೂ ಓದಿ : ಸ್ಯಾಟಲೈಟ್ ಮೊಬೈಲ್ ಸಂಪರ್ಕಕ್ಕೆ ಸಿದ್ಧತೆ; ತಿಂಗಳಿಗೆ 12 ಉಪಗ್ರಹ ಹಾರಿಸಲಿದೆ ಸ್ಪೇಸ್ಎಕ್ಸ್