ಕ್ವೀನ್ಸ್‌ಲ್ಯಾಂಡ್(ಆಸ್ಟ್ರೇಲಿಯಾ): ಸಂಶೋಧಕರ ತಂಡವೊಂದು ತ್ವರಿತ ಮತ್ತು ಸೂಜಿರಹಿತವಾಗಿ ಮಲೇರಿಯಾ ರೋಗವನ್ನು ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಇದು ಪ್ರತಿ ವರ್ಷ ಸಾವಿರಾರು ಜೀವಗಳನ್ನು ಉಳಿಸುವ ಸಾಮರ್ಥ್ಯ ಹೊಂದಿದೆ. ಈ ಸಂಶೋಧನೆಯ ಆವಿಷ್ಕಾರಗಳ ಬಗ್ಗೆ PNAS Nexus ಜರ್ನಲ್‌ನಲ್ಲಿ ವರದಿ ಪ್ರಕಟಿಸಲಾಗಿದೆ.
ಮಲೇರಿಯಾವನ್ನು ಸಾಮಾನ್ಯವಾಗಿ ರಕ್ತ ಪರೀಕ್ಷೆಯಿಂದ ಕಂಡುಹಿಡಿಯಬೇಕಿದೆ. ಆದರೆ ವಿಜ್ಞಾನಿಗಳು ಕಂಡು ಹಿಡಿದಿರುವ ಈ ಸಾಧನವನ್ನು ನಾವು ವ್ಯಕ್ತಿಯ ಕಿವಿ ಅಥವಾ ಬೆರಳಿನ ಮೇಲಿಟ್ಟರೆ ಕೇವಲ 5 ರಿಂದ 10 ಸೆಕೆಂಡ್ನಲ್ಲಿ ರೋಗ ಪತ್ತೆ ಹಚ್ಚಬಹುದಾಗಿದೆ. ಈ ತಂತ್ರಜ್ಞಾನದಿಂದ ನಾವು ಜಾಗತಿಕವಾಗಿ ಮಲೇರಿಯಾ ವಿರುದ್ಧ ಹೋರಾಡಬಹುದು. ಇದು ಒಂದು ಕ್ರಾಂತಿಯನ್ನೇ ಸೃಷ್ಟಿ ಮಾಡಲಿದೆ ಎಂದು ಯುಕ್ಯೂ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸಸ್‌ನ ಇಂಟರ್ನ್ಯಾಷನಲ್ ಟೀಮ್ ಲೀಡರ್ ಡಾ. ಮ್ಯಾಗಿ ಲಾರ್ಡ್ ಹೇಳಿದ್ದಾರೆ.
ಪ್ರಸ್ತುತ ಇದು ಒಂದು ಹಳ್ಳಿ ಅಥವಾ ಪಟ್ಟಣದಂತಹ ದೊಡ್ಡ ಜನಸಂಖ್ಯೆಯನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಈ ಉಪಕರಣದಿಂದ ಇಡೀ ಗ್ರಾಮ ಅಥವಾ ಪಟ್ಟಣವು ಮಲೇರಿಯಾದಿಂದ ಬಳಲುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ತ್ವರಿತವಾಗಿ ಕಂಡುಹಿಡಿಯಬಹುದು ಎಂದು ಲಾರ್ಡ್ ಮಾಹಿತಿ ನೀಡಿದರು.