ಬೀಜಿಂಗ್ (ಚೀನಾ) : ಓಪನ್ ಎಐ ನ ಚಾಟ್ ಬಳಸಿ ನಕಲಿ ಸುದ್ದಿ (ಫೇಕ್ ನ್ಯೂಸ್) ತಯಾರಿಸಿ ಅದನ್ನು ಶೇರ್ ಮಾಡಿದ ವ್ಯಕ್ತಿಯೊಬ್ಬನನ್ನು ಚೀನಾದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ. ಚೀನಾದಲ್ಲಿ ಚಾಟ್ ಜಿಪಿಟಿಯನ್ನು ದುರ್ಬಳಕೆ ಮಾಡಿಕೊಂಡ ಮೊದಲ ಪ್ರಕರಣ ಇದಾಗಿರಬಹುದು ಎನ್ನಲಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಸುಳ್ಳು ಮತ್ತು ತಪ್ಪಾದ ಮಾಹಿತಿಯನ್ನು ತಯಾರಿಸಿದ ಹಾಂಗ್ ಹೆಸರಿನ ಶಂಕಿತನನ್ನು ಬಂಧಿಸಲಾಗಿದೆ ಎಂದು ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದ ಪೊಲೀಸರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚೀನಾದಲ್ಲಿ ChatGPT ನೇರವಾಗಿ ಲಭ್ಯವಿಲ್ಲದಿದ್ದರೂ, ಬಳಕೆದಾರರು ವಿಶ್ವಾಸಾರ್ಹ VPN ಸಂಪರ್ಕವನ್ನು ಹೊಂದಿದ್ದರೆ ಅದನ್ನು ಬಳಸಬಹುದು. ಚೀನೀ ಸರ್ಚ್ ಇಂಜಿನ್ ಬೈದು ನಡೆಸುತ್ತಿರುವ ಬ್ಲಾಗ್ ಶೈಲಿಯ ಪ್ಲಾಟ್‌ಫಾರ್ಮ್ ಬೈಜಿಯಾಹಾವೊದಲ್ಲಿ 20 ಕ್ಕೂ ಹೆಚ್ಚು ಖಾತೆಗಳಿಂದ ರೈಲು ಅಪಘಾತದ ಕುರಿತು ಎಐ ಲಿಖಿತ ನಕಲಿ ಸುದ್ದಿಯನ್ನು ಪೋಸ್ಟ್ ಮಾಡಲಾಗಿರುವುದನ್ನು ಸೈಬರ್ ಸೆಕ್ಯುರಿಟಿ ತಂಡವು ಕಂಡುಹಿಡಿದಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳುವ ಮೊದಲೇ ಈ ಫೇಕ್ ನ್ಯೂಸ್ ಅನ್ನು 15,000 ಕ್ಕೂ ಹೆಚ್ಚು ಜನ ಕ್ಲಿಕ್ ಮಾಡಿ ಓದಿದ್ದಾರೆ.
ಒಂದೇ ನಕಲಿ ಕಥೆಯ ವಿಭಿನ್ನ ಆವೃತ್ತಿಗಳನ್ನು ತ್ವರಿತವಾಗಿ ತಯಾರಿಸಲು ಚಾಟ್‌ಜಿಪಿಟಿ ಬಳಸಿದ್ದನ್ನು ಮತ್ತು ಅವುಗಳನ್ನು ತನ್ನ ಬೈಜಿಯಾಹಾವೊ ಖಾತೆಗಳಿಗೆ ಅಪ್‌ಲೋಡ್ ಮಾಡಿರುವುದನ್ನು ಹಾಂಗ್ ಒಪ್ಪಿಕೊಂಡಿದ್ದಾನೆ. ಉದ್ದೇಶಪೂರ್ವಕವಾಗಿ ಜಗಳಗಳನ್ನು ಸೃಷ್ಟಿಸುವುದು ಮತ್ತು ತೊಂದರೆಗಳನ್ನು ಉತ್ತೇಜಿಸುವ ಆರೋಪಗಳನ್ನು ಹಾಂಗ್ ಮೇಲೆ ಹೊರಿಸಲಾಗಿದೆ. ಈ ಆರೋಪ ಸಾಬೀತಾದಲ್ಲಿ ಈತನಿಗೆ ಗರಿಷ್ಠ 5 ವರ್ಷಗಳ ಜೈಲು ಶಿಕ್ಷೆಯಾಗಬಹುದು. ಆದಾಗ್ಯೂ ವಿಶೇಷವಾಗಿ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಅಪರಾಧಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಹೆಚ್ಚುವರಿ ದಂಡವನ್ನು ನೀಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.