ಹೈದರಾಬಾದ್:ವಿಶ್ವದಲ್ಲಿ ಇಂಟರ್ನೆಟ್ ಸೇವೆಗಳು ಸುಲಭವಾಗಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ವಿಶ್ವದ ಜನಸಂಖ್ಯೆಯ ಶೇ 60ಕ್ಕೂ ಹೆಚ್ಚು ಜನ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ವಿಶ್ವದ ಜನಸಂಖ್ಯೆ ಇತ್ತೀಚೆಗೆ 800 ಕೋಟಿ ಗಡಿಯನ್ನು ದಾಟಿದೆ. ಇದರಲ್ಲಿ ಜುಲೈ 2023 ರ ಹೊತ್ತಿಗೆ ಸುಮಾರು 500 ಕೋಟಿ ಜನ (4.88 ಶತಕೋಟಿ ಬಳಕೆದಾರರ ಗುರುತುಗಳು) ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ 3.7 ರಷ್ಟು ಹೆಚ್ಚಾಗಿದೆ.
ಡಿಜಿಟಲ್ ಸಲಹಾ ಸಂಸ್ಥೆ ಕೆಪಿಯೋಸ್ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿ 10 ಇಂಟರ್ನೆಟ್ ಬಳಕೆದಾರರಲ್ಲಿ ಒಂಬತ್ತು ಜನ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಪ್ರತಿ ಸೆಕೆಂಡಿಗೆ 5.5 ಜನ ಹೊಸದಾಗಿ ಸಾಮಾಜಿಕ ಮಾಧ್ಯಮಕ್ಕೆ ಸೇರುತ್ತಿದ್ದಾರೆ. ಕಳೆದ ವರ್ಷವೊಂದರಲ್ಲೇ 17.3 ಕೋಟಿ ಜನ ಹೊಸದಾಗಿ ಸಾಮಾಜಿಕ ಮಾಧ್ಯಮಕ್ಕೆ ಸೇರಿದ್ದಾರೆ ಎಂದು ಅಂದಾಜಿಸಲಾಗಿದೆ.
ಪೂರ್ವ ಮತ್ತು ಮಧ್ಯ ಆಫ್ರಿಕಾದಲ್ಲಿ 11 ಜನರಲ್ಲಿ ಒಬ್ಬರು ಮಾತ್ರ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ. ಭಾರತದಲ್ಲಿ, ಪ್ರತಿ ಮೂವರಲ್ಲಿ ಒಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವುದು ವಿಶೇಷ. ಸಾಮಾಜಿಕ ಮಾಧ್ಯಮದಲ್ಲಿ ಕಳೆದ ಸಮಯ ನೋಡುವುದಾದರೆ- ಪ್ರತಿಯೊಬ್ಬ ಬಳಕೆದಾರರು ದಿನಕ್ಕೆ ಸುಮಾರು 2.26 ಗಂಟೆಗಳಷ್ಟು ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ ಎಂದು ತಿಳಿದುಬಂದಿದೆ. ಬ್ರೆಜಿಲಿಯನ್ನರು ಅತಿ ಹೆಚ್ಚು ಅಂದರೆ ದಿನಕ್ಕೆ 3.49 ಗಂಟೆಗಳ ಕಾಲ ಅವನ್ನು ಬಳಸಿದರೆ, ಜಪಾನ್ನಲ್ಲಿ ಈ ಸಮಯವು ಒಂದು ಗಂಟೆಗಿಂತ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.