ವಾಷಿಂಗ್ಟನ್ (ಅಮೆರಿಕ):ಜುನೋ ಮಿಷನ್‌ಗೆ ಅಳವಡಿಸಿದ್ದ ವಿಶೇಷ ಕ್ಯಾಮರಾ ಗುರುಗ್ರಹದಲ್ಲಿ ಉಂಟಾಗಿದ್ದ ಮಿಂಚಿನ ಬೆಳಕನ್ನು ಸೆರೆಹಿಡಿದಿದೆ ಎಂದು ಅಮೆರಿಕದ ಪ್ರತಿಷ್ಟಿತ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ತಿಳಿಸಿದೆ. ಜುನೋ ಮಿಷನ್ ಡಿಸೆಂಬರ್ 30, 2020ರಂದು ಗುರುಗ್ರಹದ 31ನೇ ಪ್ರದಕ್ಷಿಣೆ ಪೂರ್ಣಗೊಳಿಸುತ್ತಿದ್ದಂತೆ ಈ ನೋಟವನ್ನು ದಾಖಲಿಸಿಕೊಂಡಿತು. ಚಿತ್ರದಲ್ಲಿ ಗುರುಗ್ರಹದ ಉತ್ತರ ಧ್ರುವದ ಬಳಿ ಒಂದು ಸುಳಿ ಕಾಣುತ್ತದೆ. ಆ ಕುಳಿಯ ಒಂದು ಭಾಗದಲ್ಲಿ ಮಿಂಚಿನ ಬೆಳಕನ್ನು ನೋಡಬಹುದು. ಬಾಹ್ಯಾಕಾಶ ನೌಕೆಯ ಜುನೋಕ್ಯಾಮ್ ಉಪಕರಣ ದೃಶ್ಯವನ್ನು ಸೆರೆ ಹಿಡಿದಿದೆ.
ಭೂ ಗ್ರಹದ ಮೇಲೆ ಮಿಂಚುಗಳು ನೀರಿನಿಂದ ಸೃಷ್ಟಿಯಾದ ಮೋಡಗಳಿಂದ ಹುಟ್ಟಿಕೊಳ್ಳುತ್ತವೆ. ಸಮಭಾಜಕದ ಬಳಿ ಇವುಗಳ ಪ್ರಮಾಣ ಹೆಚ್ಚು. ಆದರೆ ಗುರುಗ್ರಹದಲ್ಲಿ ಮಿಂಚು ಅಮೋನಿಯಾ- ನೀರಿನ ದ್ರಾವಣವನ್ನು ಹೊಂದಿರುವ ಮೋಡಗಳಿಂದಲೂ ಸಂಭವಿಸುತ್ತದೆ. ಈ ಮಿಂಚು ಧ್ರುವಗಳ ಬಳಿ ಜಾಸ್ತಿ ಘಟಿಸುತ್ತವೆ ಎಂದು ಎಂದು ನಾಸಾ ವಿವರಣೆ ನೀಡಿದೆ.
2022ರಲ್ಲಿ ವಿಜ್ಞಾನಿ ಕೆವಿನ್ ಎಂ. ಗಿಲ್ ಅವರು ಜುನೋಕ್ಯಾಮ್‌ನಿಂದ ಕಚ್ಚಾ ದತ್ತಾಂಶದ ಮೂಲಕ ಈ ಚಿತ್ರವನ್ನು ಸಂಸ್ಕರಿಸಿದ್ದರು. ಚಿತ್ರವನ್ನು ಸೆರೆಹಿಡಿಯುವ ಸಮಯದಲ್ಲಿ ಜುನೋ ಮಿಷನ್ ಗುರುಗ್ರಹದ ಮೋಡದ ಮೇಲ್ಭಾಗದಿಂದ ಸುಮಾರು 32,000 ಕಿ.ಮೀ.ಗಳಷ್ಟು ಎತ್ತರದಲ್ಲಿತ್ತು. ಗ್ರಹವನ್ನು ಸಮೀಪಿಸುತ್ತಿದ್ದಂತೆ ಸುಮಾರು 78 ಡಿಗ್ರಿ ಅಕ್ಷಾಂಶದಲ್ಲಿತ್ತು. ಮುಂದಿನ ತಿಂಗಳಿನಲ್ಲಿ ಬಾಹ್ಯಾಕಾಶ ನೌಕೆಯು ದೈತ್ಯ ಗ್ರಹದ ಬದಿಯಲ್ಲಿ ಹಾದುಹೋಗಲಿದೆ. ಇದರಿಂದಾಗಿ ಇಂಥ ಮಿಂಚನ್ನು ಸೆರೆ ಹಿಡಿಯಲು ಹೆಚ್ಚು ಅವಕಾಶ ಸಿಗಲಿದೆ ಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ.