ವಾಷಿಂಗ್ಟನ್: ಭವಿಷ್ಯದಲ್ಲಿ ಸಂಭಾವ್ಯ ಕ್ಷುದ್ರಗ್ರಹ ಅಥವಾ ಧೂಮಕೇತುಗಳು ಭೂಮಿಗೆ ಅಪ್ಪಳಿಸುವುದರ ಅಪಾಯಗಳಿಂದ ಭೂಮಿಯನ್ನು ರಕ್ಷಿಸುವ ತಂತ್ರಜ್ಞಾನವನ್ನು ಪರೀಕ್ಷಿಸುವ ಪ್ರಯತ್ನದಲ್ಲಿ ನಾಸಾ ಬಾಹ್ಯಾಕಾಶ ನೌಕೆಯು ಮಂಗಳವಾರ ಮುಂಜಾನೆ ಕ್ಷುದ್ರಗ್ರಹಕ್ಕೆ ಅಪ್ಪಳಿಸಲು ಸಿದ್ಧವಾಗಿದೆ.
ನಾಸಾದ ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ (Double Asteroid Redirection Test- DART) (ಡಾರ್ಟ್) ಯೋಜನೆಯಡಿ ನೌಕೆಯು ಸೋಮವಾರ 7.14 PM ಹೊತ್ತಿಗೆ ಕ್ಷುದ್ರಗ್ರಹಕ್ಕೆ ಅಪ್ಪಳಿಸಲು ಸಜ್ಜಾಗಿದೆ. ಇದು ಇಂಥ ಪ್ರಥಮ ಪ್ರಯತ್ನವಾಗಿದೆ. ಕ್ಷುದ್ರಗ್ರಹಕ್ಕೆ ನೌಕೆ ಅಪ್ಪಳಿಸುವ ಯೋಜನೆಯಿಂದ ಭೂಮಿಗೆ ಯಾವುದೇ ಅಪಾಯವಿಲ್ಲ.
ಈ ಪರೀಕ್ಷೆಯು ಬಾಹ್ಯಾಕಾಶ ನೌಕೆಯೊಂದು ಟಾರ್ಗೆಟ್ ಮಾಡಲಾದ ಕ್ಷುದ್ರಗ್ರಹಕ್ಕೆ ತಾನಾಗಿಯೇ ನ್ಯಾವಿಗೇಟ್ ಮಾಡಬಹುದು ಮತ್ತು ಉದ್ದೇಶಪೂರ್ವಕವಾಗಿ ಅದರೊಂದಿಗೆ ಘರ್ಷಿಸುತ್ತದೆ ಎಂಬುದನ್ನು ತೋರಿಸುತ್ತದೆ. ಇದು ಭೂಮಿಯ ಮೇಲಿರುವ ದೂರದರ್ಶಕಗಳನ್ನು ಬಳಸಿಕೊಂಡು ಅಳೆಯಬಹುದಾದ ರೀತಿಯಲ್ಲಿ ಕ್ಷುದ್ರಗ್ರಹದ ಚಲನೆಯನ್ನು ಬದಲಾಯಿಸುತ್ತದೆ ಎಂಬುದನ್ನು ತೋರಿಸಲಿದೆ ಎಂದು ನಾಸಾ ಹೇಳಿದೆ.
ಭೂಮಿಯ ಹತ್ತಿರದ ಬೈನರಿ ಕ್ಷುದ್ರಗ್ರಹ ವ್ಯವಸ್ಥೆ ಡಿಡಿಮೋಸ್ ಇದು ಡಾರ್ಟ್ನ ಟಾರ್ಗೆಟ್ ಕ್ಷುದ್ರಗ್ರಹವಾಗಿದೆ. 780 ಮೀಟರ್ ವ್ಯಾಸ ಹೊಂದಿರುವ ಡಿಡಿಮೋಸ್ ಸುತ್ತ ಸುಮಾರು 160 ಮೀಟರ್ ಅಳತೆಯ ಚಿಕ್ಕ ಸೈಜಿನ ಡಿಮಾರ್ಫೊಸ್ ಗಳು ಸುತ್ತುತ್ತಿವೆ.
ಡಾರ್ಟ್ ತನ್ನ ಕಕ್ಷೆಯನ್ನು ಬೈನರಿ ವ್ಯವಸ್ಥೆಯೊಳಗೆ ಬದಲಾಯಿಸಲು ಡೈಮಾರ್ಫೋಸ್‌ನ ಮೇಲೆ ಪ್ರಭಾವ ಬೀರುತ್ತದೆ ಮತ್ತು ಡಾರ್ಟ್ ತನಿಖಾ ತಂಡವು ಡಾರ್ಟ್ನ ಚಲನ ಪ್ರಭಾವದ ಫಲಿತಾಂಶಗಳನ್ನು ಕ್ಷುದ್ರಗ್ರಹದೊಂದಿಗೆ ಹೋಲಿಸುತ್ತದೆ. ಹಾಗೆ ಮಾಡುವುದರಿಂದ ಈ ತಗ್ಗಿಸುವಿಕೆಯ ವಿಧಾನದ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುತ್ತದೆ.
ಭವಿಷ್ಯದ ಗ್ರಹಗಳ ರಕ್ಷಣಾ ಸನ್ನಿವೇಶಗಳಿಗೆ ಹೇಗೆ ಉತ್ತಮವಾಗಿ ಅನ್ವಯಿಸಬೇಕು ಎಂಬುದನ್ನು ನಿರ್ಣಯಿಸುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಭೂಮಿಗೆ ಅಪಾಯವನ್ನುಂಟುಮಾಡಬಹುದಾದ ಕ್ಷುದ್ರಗ್ರಹವನ್ನು ಎದುರಿಸಲು ಸಹಾಯ ಮಾಡಲು ಡಾರ್ಟ್ ಪ್ರಮುಖ ದತ್ತಾಂಶವನ್ನು ಒದಗಿಸಲಿದೆ.
ಇದು ಹೇಗೆ ಕಾರ್ಯನಿರ್ವಹಣೆ ಮಾಡಲಿದೆ:ನೌಕೆಯು ಕ್ಷುದ್ರಗ್ರಹದ ಹತ್ತಿರವಾದಾಗ ಸ್ವಯಂಚಾಲಿತ ನ್ಯಾವಿಗೇಶನ್ ಚಾಲೂ ಆಗಿ ಡಿಕ್ಕಿ ಹೊಡೆಯುವಂತೆ ಮಾಡುತ್ತದೆ. ಇದಕ್ಕೆ ಕೆಲವೇ ಕ್ಷಣಗಳ ಮುಂಚೆ ನೌಕೆ ಕೃತಕ ಉಪಗ್ರಹವೊಂದನ್ನು ಬಿಡುಗಡೆ ಮಾಡುತ್ತದೆ. ಡಿಕ್ಕಿಯಾದಾಗ ಪ್ರಖರ ಬೆಳಕಿನೊಂದಿಗೆ ಅಪಾರ ದೂಳು ಏಳುತ್ತದೆ. ದೂಳು ಕಡಿಮೆಯಾದ ಹಲವು ವರ್ಷಗಳ ನಂತರ ಅಲ್ಲಿಗೆ ತೆರಳುವ ಗಗನನೌಕೆ ಆಘಾತದ ಪ್ರಮಾಣ ಮತ್ತು ಅಲ್ಲಿನ ಸ್ಪಷ್ಟ ಚಿತ್ರ ರವಾನಿಸುತ್ತದೆ.
ಕ್ಷುದ್ರಗ್ರಹಗಳು ಹೆಚ್ಚಾಗಿ ಕಂಡು ಬರುವುದು ಎಲ್ಲಿ?:ಕ್ಷುದ್ರಗ್ರಹಗಳು ಸಾಮಾನ್ಯವಾಗಿ ಮಂಗಳ ಮತ್ತು ಗುರು ಗ್ರಹಗಳ ನಡುವಿನ ಕಕ್ಷೆಯಲ್ಲಿದ್ದುಕೊಂಡು ಸೂರ್ಯನ ಸುತ್ತ ಸುತ್ತುತ್ತಿರುತ್ತವೆ. ಆಲೂಗಡ್ಡೆ ಅಥವಾ ದುಂಡನೆಯ ಆಕಾರದ ಇವು ಶಿಲೆ ಮತ್ತು ಲೋಹಗಳಿಂದ ಕೂಡಿದ್ದು ಬರಿಯ ಕಣ್ಣಿಗೆ ಅಪರೂಪಕ್ಕೆ ಕಾಣಿಸುತ್ತವೆ. ಸೂರ್ಯನಿಂದ 20ರಿಂದ 80 ಕೋಟಿ ಕಿಲೊ ಮೀಟರ್ ದೂರದಲ್ಲಿರುವ ಇವುಗಳ ಮೇಲ್ಮೈ ಒರಟಾಗಿದ್ದು ಯಾವುದೇ ವಾತಾವರಣ ಇಲ್ಲದ್ದರಿಂದ ಗುರುತ್ವಬಲ ತೀರಾ ಕಮ್ಮಿ ಇರುತ್ತದೆ. ನಮ್ಮ ಸೌರವ್ಯೂಹ ದಲ್ಲಿ ಮಂಗಳ– ಗುರುಗ್ರಹಗಳ ನಡುವೆ 20 ಲಕ್ಷ ಕ್ಷುದ್ರಗ್ರಹಗಳಿರಬಹುದೆಂಬ ಅಂದಾಜಿದೆ. ಕೆಲವು ಅಡಿಗಳಿಂದ ಹಿಡಿದು ಕಿಲೊ ಮೀಟರ್‌ಗಟ್ಟಲೆ ವ್ಯಾಸ ಹೊಂದಿರುವ ಇವು ದೊಡ್ಡ ಗ್ರಹಗಳ ಸೆಳೆತಕ್ಕೆ ಸಿಲುಕಿ ಉಪಗ್ರಹಗಳಾಗಿ ಬದಲಾದ ಉದಾಹರಣೆಗಳಿವೆ.
ಇದನ್ನೂ ಓದಿ: ದೇಶದ 60 ಸ್ಟಾರ್ಟ್ಅಪ್ಗಳ ಜೊತೆ ಇಸ್ರೋ ಒಪ್ಪಂದ: ಬಾಹ್ಯಾಕಾಶ ಕ್ಷೇತ್ರದಲ್ಲಿ ದೊರೆಯಲಿದೆ ವಿಪುಲ ಅವಕಾಶ