ನವದೆಹಲಿ: ವೃತ್ತಿಪರ ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್ ಭಾರತೀಯ ಬಳಕೆದಾರರಿಗಾಗಿ ಐಡೆಂಟಿಟಿ ವೆರಿಫಿಕೇಶನ್ (ಗುರುತಿನ ಪರಿಶೀಲನೆ) ಸೌಲಭ್ಯವನ್ನು ಆರಂಭಿಸಿದೆ. "ಐಡೆಂಟಿಟಿ ವೆರಿಫಿಕೇಶನ್ ಎಂದರೆ ವ್ಯಕ್ತಿಯೊಬ್ಬರಿಗೆ ಸರ್ಕಾರದಿಂದ ನೀಡಲಾದ ಐಡಿ ದಾಖಲೆಯನ್ನು ಲಿಂಕ್ಡ್‌ಇನ್‌ನ ಪರಿಶೀಲನಾ ಪಾರ್ಟನರ್ ಒಬ್ಬರು ಪರಿಶೀಲಿಸುವುದು ಎಂದರ್ಥ" ಎಂದು ಲಿಂಕ್ಡ್‌ಇನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಅಶುತೋಷ್ ಗುಪ್ತಾ ಬುಧವಾರ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಥರ್ಡ್ ಪಾರ್ಟಿ ಐಡೆಂಟಿಟಿ ಸೇವೆ ನೀಡುವ ಹೈಪರ್ ವರ್ಜ್ ಕಂಪನಿಯು, ಭಾರತ ಸರ್ಕಾರದ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಗುರುತಿನ ದಾಖಲೆಗಳನ್ನು ಪರಿಶೀಲಿಸುವ ಡಿಜಿಲಾಕರ್ ಆನ್ಲೈನ್ ವ್ಯಾಲೆಟ್ ಮೂಲಕ ಲಿಂಕ್ಡ್ ಇನ್ ಗಾಗಿ ಬಳಕೆದಾರರ ಐಡೆಂಟಿಟಿ ವೆರಿಫಿಕೇಶನ್ ಸೇವೆ ನೀಡಲಿದೆ. ಮಾನ್ಯವಾದ ಆಧಾರ್ ಸಂಖ್ಯೆ ಮತ್ತು ಭಾರತೀಯ ಫೋನ್ ನಂಬರ್ ಅನ್ನು ಹೊಂದಿರುವ ಬಳಕೆದಾರರು ತಮ್ಮ ಐಡಿಯನ್ನು ವೆರಿಫಿಕೇಶನ್ ಮಾಡಿಸಿಕೊಳ್ಳಬಹುದು.
"ಲಿಂಕ್ಡ್‌ಇನ್‌ನಲ್ಲಿ ನೀವು ನಿಮ್ಮ ಗುರುತಿನ ನೈಜತನ ತೋರಿಸಿದಾಗ, ನಿಮಗೆ ಮತ್ತು ನಿಮ್ಮ ಸಮುದಾಯಕ್ಕೆ ಸಂಬಂಧಿಸಿದ ವೃತ್ತಿಪರ ಅವಕಾಶಗಳನ್ನು ಹುಡುಕಲು ನಿಮಗೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿದೆ" ಎಂದು ಗುಪ್ತಾ ಹೇಳಿದರು. ಬಳಕೆದಾರರ ಆಧಾರ್ ನಲ್ಲಿನ ಖಾಸಗಿ ಮಾಹಿತಿಗೆ ಲಿಂಕ್ಡ್ ಇನ್ ಯಾವುದೇ ಪ್ರವೇಶ ಹೊಂದಿರುವುದಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
"ನೀವು ಆಧಾರ್ ಹೊಂದಿಲ್ಲದಿದ್ದರೆ ಲಿಂಕ್ಡ್‌ಇನ್‌ನಲ್ಲಿ ಇತರ ವಿಧಾನಗಳನ್ನು ಬಳಸಿಕೊಂಡು ಐಡೆಂಟಿಟಿ ವೆರಿಫಿಕೇಶನ್ ಮಾಡಿಸಬಹುದು. ನಿಮ್ಮ ಕೆಲಸದ ಇಮೇಲ್ ಅಥವಾ ಕೆಲಸದ ದಾಖಲೆಗಳ ಮೂಲಕವೂ ನೀವು ಇದನ್ನು ಮಾಡಬಹುದು" ಎಂದು ಅವರು ತಿಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಕಂಪನಿಯು ಅಮೆರಿಕದಲ್ಲಿ ಐಡಿ ವೆರಿಫಿಕೇಶನ್ ಸೌಲಭ್ಯವನ್ನು ಪ್ರಾರಂಭಿಸಿತ್ತು ಮತ್ತು ಶೀಘ್ರದಲ್ಲೇ ಈ ಸೌಲಭ್ಯವನ್ನು ಇತರ ದೇಶಗಳಲ್ಲೂ ಪರಿಚಯಿಸಲು ಯೋಜಿಸಿದೆ.