ಟೋಕಿಯೊ:ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೊರೇಶನ್ ಏಜೆನ್ಸಿಯ (ಜಾಕ್ಸಾ) ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ಮೂನ್ (SLIM - ಸ್ಲಿಮ್) ಲ್ಯಾಂಡರ್ ಚಂದ್ರನ ಕಕ್ಷೆಯಿಂದ ಚಂದ್ರನ ಮೇಲ್ಮೈನ ಮೊದಲ ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ. ಶಕ್ತಿಯುತ ಎಕ್ಸ್-ರೇ ಬಾಹ್ಯಾಕಾಶ ದೂರದರ್ಶಕವಾದ ಎಕ್ಸ್ಆರ್ಐಎಸ್ಎಂ (XRISM) ನೊಂದಿಗೆ ಸೆಪ್ಟೆಂಬರ್ 6ರಂದು 2.7 ಮೀಟರ್ ಉದ್ದದ ಸ್ಲಿಮ್ ನೌಕೆಯನ್ನು ಉಡಾವಣೆ ಮಾಡಲಾಗಿತ್ತು.
ಇದು ಕ್ರಿಸ್ಮಸ್ ದಿನದಂದು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತು ಮತ್ತು ಜನವರಿ 20, 2024ರಂದು ದೇಶದ ಮೊದಲ ಚಂದ್ರನ ಮೇಲೆ ಲ್ಯಾಂಡಿಂಗ್ಗೆ ವೇದಿಕೆಯನ್ನು ಯಶಸ್ವಿಯಾಗಿ ಸಜ್ಜುಗೊಳಿಸಿತು ಎಂದು ಸಂಸ್ಥೆ ತಿಳಿಸಿದೆ.
ಎಕ್ಸ್‌ನಲ್ಲಿ ಜಾಕ್ಸಾ ಹಂಚಿಕೊಂಡಿರುವ ಚಂದ್ರನ ಚಿತ್ರವು ಕಪ್ಪು-ಬಿಳುಪು ವರ್ಣಗಳಲ್ಲಿದ್ದು ಚಂದ್ರನ ಮೇಲಿನ ಕುಳಿಗಳನ್ನು ತೋರಿಸುತ್ತದೆ. ಜಪಾನ್ ಸಮಯ ಡಿಸೆಂಬರ್ 25ರ ಸಂಜೆ 4:51ಕ್ಕೆ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ತಲುಪಿದ ನಂತರ ಅದು ಈ ಚಿತ್ರಗಳನ್ನು ಸೆರೆ ಹಿಡಿದಿದೆ. "ಸ್ಲಿಮ್ 16:51ಕ್ಕೆ ಮುಖ್ಯ ಎಂಜಿನ್ ಇಂಜೆಕ್ಷನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು ಮತ್ತು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತು! ಸ್ಲಿಮ್ ಕಳುಹಿಸಿದ ಚಂದ್ರನ ಮೇಲಿನ ಚಿತ್ರ ಇಲ್ಲಿದೆ ನೋಡಿ" ಎಂದು ಜಾಕ್ಸಾ ಅಧಿಕಾರಿಗಳು ಎಕ್ಸ್‌ನಲ್ಲಿ ಬರೆದಿದ್ದಾರೆ.
ಒಂದು ವೇಳೆ ಜಪಾನ್ ಚಂದ್ರನ ಮೇಲೆ ಲ್ಯಾಂಡ್ ಮಾಡಲು ಯಶಸ್ವಿಯಾದರೆ ರಷ್ಯಾ, ಅಮೆರಿಕ, ಚೀನಾ ಮತ್ತು ಭಾರತದ ನಂತರ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಐದನೇ ದೇಶವಾಗಲಿದೆ.