ಕರ್ನಾಟಕ

karnataka

ETV Bharat / science-and-technology

ವರ್ಷಕ್ಕೆ ₹6 ಲಕ್ಷ ಗಳಿಸುತ್ತಿದ್ದಾರೆ ಭಾರತದ ವೃತ್ತಿಪರ ಗೇಮರ್ಸ್​: ಅಧ್ಯಯನ ವರದಿ

ಭಾರತದಲ್ಲಿ ಗೇಮಿಂಗ್ ಜನಪ್ರಿಯವಾಗುತ್ತಿದೆ. ಗೇಮರ್​ಗಳ ಆದಾಯ ಕೂಡ ಗಮನಾರ್ಹವಾಗಿ ಏರಿಕೆಯಾಗುತ್ತಿದೆ.

Over 45% of serious gamers earning above 6L per annum in India: Report
Over 45% of serious gamers earning above 6L per annum in India: Report

By ETV Bharat Karnataka Team

Published : Nov 24, 2023, 1:18 PM IST

ನವದೆಹಲಿ: 2022ಕ್ಕೆ ಹೋಲಿಸಿದರೆ ಈ ವರ್ಷ ಭಾರತದ ಗೇಮರ್​ಗಳ ಆದಾಯ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಭಾರತದಲ್ಲಿನ ಸುಮಾರು ಅರ್ಧದಷ್ಟು (45 ಪ್ರತಿಶತ) ಪರಿಣಿತ ವೃತ್ತಿಪರ ಗೇಮರ್​ಗಳು 2023 ರಲ್ಲಿ ವರ್ಷಕ್ಕೆ 6 ರಿಂದ 12 ಲಕ್ಷದವರೆಗೆ ಗಳಿಸುತ್ತಿದ್ದಾರೆ ಎಂದು ವರದಿ ಗುರುವಾರ ತಿಳಿಸಿದೆ. ಪಿಸಿ ಮತ್ತು ಪ್ರಿಂಟರ್ ತಯಾರಕ ಕಂಪನಿ ಎಚ್​ಪಿ ತಯಾರಿಸಿದ ಸಂಶೋಧನಾ ವರದಿಯ ಪ್ರಕಾರ, ಇ-ಸ್ಪೋರ್ಟ್ಸ್ ಉದ್ಯಮದ ಬೆಳವಣಿಗೆಯು ವೈವಿಧ್ಯಮಯ ವೃತ್ತಿ ಅವಕಾಶಗಳು ಮತ್ತು ಗಳಿಕೆಯ ಹೆಚ್ಚಳದೊಂದಿಗೆ ಭಾರತೀಯ ಗೇಮರ್​ಗಳ ಸಮುದಾಯಕ್ಕೆ ಅನುಕೂಲ ಮಾಡಿಕೊಡುತ್ತಿದೆ.

"ಇ-ಸ್ಪೋರ್ಟ್ಸ್ ಉದ್ಯಮ ಬೆಳೆಯುತ್ತಿರುವುದು ಮತ್ತು ಗೇಮರ್​ಗಳಿಗೆ ವೈವಿಧ್ಯಮಯ ವೃತ್ತಿ ಅವಕಾಶಗಳು ಒದಗಿ ಬರುತ್ತಿರುವುದು ಪ್ರೋತ್ಸಾಹದಾಯಕವಾಗಿದೆ. ಭಾರತೀಯ ಯುವಕರು ಜಾಗತಿಕ ಇ-ಸ್ಪೋರ್ಟ್ಸ್ ರಂಗದಲ್ಲಿ ದೊಡ್ಡ ಸಾಧನೆ ಮಾಡುವುದಲ್ಲದೆ, ಉದ್ಯಮಶೀಲತೆಯ ಅವಕಾಶಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಎಚ್​ಪಿ ಇಂಡಿಯಾ ಮಾರ್ಕೆಟ್​ ಪರ್ಸನಲ್ ಸಿಸ್ಟಮ್ಸ್​ ವಿಭಾಗದ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಹೇಳಿದರು.

ಭಾರತದ 15 ನಗರಗಳಲ್ಲಿ 3,000 ಗೇಮರ್​ಗಳನ್ನು ಸಂದರ್ಶಿಸಿ ತಯಾರಿಸಲಾದ ವರದಿಯು, ಮೋಜು ಮತ್ತು ವಿಶ್ರಾಂತಿಯ ಜೊತೆಗೆ ಗೇಮರ್​ಗಳು ಈಗ ಹಣ ಮತ್ತು ಮನ್ನಣೆಯನ್ನು ಗಳಿಸಲು ಗೇಮಿಂಗ್​ಗೆ ಆಕರ್ಷಿತರಾಗುತ್ತಿದ್ದಾರೆ ಎಂದು ತೋರಿಸಿದೆ. ವರದಿಯ ಪ್ರಕಾರ ಪ್ರಾಯೋಜಕತ್ವಗಳು ಮತ್ತು ಇ-ಸ್ಪೋರ್ಟ್ಸ್ ಪಂದ್ಯಾವಳಿಗಳು ಗಮನಾರ್ಹ ಆದಾಯದ ಮೂಲಗಳಾಗಿ ಹೊರಹೊಮ್ಮಿವೆ. ಇದು ಗೇಮಿಂಗ್ ಸಮುದಾಯದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರದರ್ಶಿಸುತ್ತದೆ.

ಇನ್​ಫ್ಲುಯೆನ್ಸರ್​ ಆಗುವುದು ಅಥವಾ ಇ-ಸ್ಪೋರ್ಟ್​ ಮ್ಯಾನೇಜ್​ಮೆಂಟ್​ನಲ್ಲಿ ತೊಡಗಿಸಿಕೊಳ್ಳುವುದು ತಮ್ಮ ಆದ್ಯತೆಯ ವೃತ್ತಿಜೀವನದ ಆಯ್ಕೆಯಾಗಿದೆ ಎಂದು ಗೇಮರ್​ಗಳು ಹೇಳಿದ್ದಾರೆ. ಇನ್ನು ಗೇಮಿಂಗ್ ಈಗ ಮೆಟ್ರೊ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಸಣ್ಣ ನಗರಗಳಿಗೂ ಹರಡಿದೆ. ಮೆಟ್ರೋ ಅಲ್ಲದ ನಗರಗಳಲ್ಲಿ ವೃತ್ತಿಪರ ಗೇಮರ್ ಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ ಎಂದು ವರದಿ ತೋರಿಸಿದೆ. ಗೇಮಿಂಗ್ ನಿರ್ದಿಷ್ಟ ಜನಸಮೂಹಕ್ಕೆ ಸೀಮಿತವಾಗಿಲ್ಲ. ಜೆನ್ ಝಡ್ ನ 75 ಪ್ರತಿಶತ ಮತ್ತು ಮಿಲೇನಿಯಲ್​ನ 67 ಪ್ರತಿಶತದಷ್ಟು ಜನರು ವೃತ್ತಿಪರ ಗೇಮರ್ ಗಳಾಗಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಸುಮಾರು 58 ಪ್ರತಿಶತದಷ್ಟು ಮಹಿಳಾ ಗೇಮರ್​ಗಳು ವೃತ್ತಿಪರ ಗೇಮರ್​ಗಳು ಎಂದು ಗುರುತಿಸಲ್ಪಟ್ಟಿದ್ದಾರೆ. ಇದು ಗೇಮಿಂಗ್​ನ ಅಂತರ್ಗತ ಸ್ವರೂಪವನ್ನು ಒತ್ತಿಹೇಳುತ್ತದೆ. ಹೆಚ್ಚುವರಿಯಾಗಿ, ಮೂವರು ಗೇಮರ್​ಗಳಲ್ಲಿ ಒಬ್ಬರು ಹಣಕಾಸು ಲಾಭಕ್ಕಾಗಿ ಅಥವಾ ಮನ್ನಣೆಗಾಗಿ ಗೇಮಿಂಗ್​ನಲ್ಲಿ ಭಾಗವಹಿಸುತ್ತಾರೆ. ಭಾರತದಲ್ಲಿ ಗೇಮಿಂಗ್ ಕೋರ್ಸ್​ಗಳ ಬಗ್ಗೆ ಶೇಕಡಾ 61 ರಷ್ಟು ಜನರಿಗೆ ತಿಳಿದಿಲ್ಲ. ಅರ್ಧಕ್ಕಿಂತ ಹೆಚ್ಚು ಗೇಮರ್​ಗಳು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಯೂಟ್ಯೂಬ್ ಮತ್ತು ಗೇಮ್ ಸ್ನೇಹಿತರನ್ನು ಅವಲಂಬಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸುಮಾರು 57 ಪ್ರತಿಶತದಷ್ಟು ಜನರು ಗೇಮಿಂಗ್​ನಲ್ಲಿ ಉತ್ತಮಗೊಳ್ಳಲು ಆಟದ ತರಬೇತಿಯನ್ನು ಬಯಸುತ್ತಾರೆ. ಗೇಮಿಂಗ್ ಬಗ್ಗೆ ಪೋಷಕರ ದೃಷ್ಟಿಕೋನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ವರದಿ ಬಹಿರಂಗಪಡಿಸಿದೆ. 42 ಪ್ರತಿಶತದಷ್ಟು ಜನರು ಗೇಮಿಂಗ್ ಅನ್ನು ಹವ್ಯಾಸವಾಗಿ ಅನುಮೋದಿಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಗೇಮಿಂಗ್ ಬಗ್ಗೆ ತಮ್ಮ ಗ್ರಹಿಕೆ ಸಕಾರಾತ್ಮಕವಾಗಿದೆ ಎಂದು ಸುಮಾರು 40 ಪ್ರತಿಶತದಷ್ಟು ಪೋಷಕರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಪೇಮೆಂಟ್​, ಫುಡ್​ ಡೆಲಿವರಿ ಆ್ಯಪ್​ಗಳು ಭಾರತೀಯರಿಗೆ ಅಚ್ಚುಮೆಚ್ಚು

ABOUT THE AUTHOR

...view details