ಲೂಧಿಯಾನಾ(ಪಂಜಾಬ್): ನಿಮಗೆ ನೈಸರ್ಗಿಕ ಮತ್ತು ಸಾವಯವ ತರಕಾರಿ ಬೇಕೆ?, ನಿಮ್ಮ ಮನೆಯ ಅಂಗಳದಲ್ಲಿ ಬೆಳೆದುಕೊಳ್ಳಬಹುದು. 'ಮನೆಯ ಮುಂದೆ ಜಾಗದಲ್ಲಿ ಮಣ್ಣಿಲ್ಲ ಎಂಬುದಾದರೆ, ನೀವು ಕುಂಡಗಳಲ್ಲಿ ನಿಮ್ಮ ಮನೆಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳಬಹುದು. ಒಂದು ವೇಳೆ ಮನೆಯ ಮುಂದೆ ಕಾಂಕ್ರಿಟ್ನ ಆವರಣವಿದೆ.. ಆದರೆ, ಹೆಚ್ಚಿನ ನೀರು ಇಲ್ಲ ಎಂದು ಕೊಳ್ಳುವವರಿಗೆ ಈ ತಂತ್ರಜ್ಞಾನ ಉಪಯೋಗಕ್ಕೆ ಬರುತ್ತದೆ. ಅದರ ಹೆಸರೇ ಹೈಡ್ರೋಪೋನಿಕ್ಸ್ ಕೃಷಿ.
ಲೂಧಿಯಾನ ಕೃಷಿ ವಿಶ್ವವಿದ್ಯಾನಿಲಯ ಈ ಹೈಡ್ರೋಪೋನಿಕ್ಸ್ ಕುರಿತಂತೆ ವ್ಯಾಪಕವಾದ ಸಂಶೋಧನೆಗಳನ್ನು ನಡೆಸುತ್ತಿದೆ. ಈ ಸಂಶೋಧನೆಗಳು ಸಫಲವಾದರೆ, ಬೆಳೆಗಳನ್ನು ಬೆಳೆಸಲು ಯಥೇಚ್ಛವಾಗಿ ಮಣ್ಣು ಬೇಕೆಂಬ ಅನಿವಾರ್ಯತೆಯೇ ಇರುವುದಿಲ್ಲ.
ಏನಿದು ಹೈಡ್ರೋಪೋನಿಕ್ಸ್ ಕೃಷಿ?:ಹೈಡ್ರೋನಿಕ್ ಕೃಷಿ ಎನ್ನುವುದು ಒಂದು ತಂತ್ರಜ್ಞಾನ. ಹೈಡ್ರೋ ಎಂದರೆ ನೀರು, ಪೋನಿಕ್ಸ್ ಎಂದರೆ ಸಸಿ ಎಂದರ್ಥ. ಅಂದರೆ ಸಸ್ಯಗಳನ್ನು ನೀರು, ಪೋಷಕಾಂಶಗಳನ್ನು ಬಳಸಿ, ಮಣ್ಣಿನ ಅವಶ್ಯಕತೆ ಇಲ್ಲದೇ ಬೆಳೆಯಬಹುದಾದ ವಿಧಾನ. ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಕೃಷಿ ತಂತ್ರಜ್ಞಾನಗಳಲ್ಲಿ ಇದೂ ಕೂಡಾ ಒಂದು.
ಈ ತಂತ್ರಜ್ಞಾನವನ್ನು ಅಮೆರಿಕ, ಇಂಗ್ಲೆಂಡ್ ಮತ್ತು ಸಿಂಗಾಪುರ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಬಳಸಲಾಗುತ್ತಿದೆ. ಈ ಆಧುನಿಕ ತಂತ್ರಜ್ಞಾನದ ಬೇಸಾಯದಲ್ಲಿ ಮಣ್ಣಿಲ್ಲದ ವಾತಾವರಣ ಸೃಷ್ಟಿಸಿ, ಕೃಷಿ ಮಾಡುತ್ತಾರೆ. ಹೈಡ್ರೋಪೋನಿಕ್ ಕೃಷಿಯಲ್ಲಿ, ಸಸ್ಯಗಳನ್ನು ನೀರಿನಲ್ಲಿ ಬೆಳೆಯಬಹುದಾಗಿದೆ.
ಇದಕ್ಕಾಗಿ ರಂಜಕ, ಸಾರಜನಕ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಷ್, ಸತು, ಗಂಧಕ, ಕಬ್ಬಿಣ ಇತ್ಯಾದಿ ಅನೇಕ ಪೋಷಕಾಂಶಗಳು ಮತ್ತು ಖನಿಜಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ದ್ರಾವಣ ತಯಾರಿಸಿ, ಅದನ್ನು ನೀರಿನೊಳಗೆ ಬೆರೆಸಿ, ಆ ನೀರಿನಲ್ಲಿ ಸಸಿಗಳನ್ನು ಇಡಲಾಗುತ್ತದೆ. ಅಂದರೆ ಸಸಿಗಳ ಬೇರುಗಳನ್ನು ಪೈಪ್ನಲ್ಲಿಟ್ಟು, ಆ ಪೈಪ್ ಅನ್ನು ನೀರಿನಲ್ಲಿ ಇಡಲಾಗುತ್ತದೆ. ನೀರಿನಲ್ಲಿ ಬೆರೆತಿರುವ ಪೋಷಕಾಂಶಗಳನ್ನು ಪಡೆದ ಸಸಿ ನೀರಿನಲ್ಲೇ ಬೆಳೆಯುತ್ತದೆ.
ಈ ತಂತ್ರಜ್ಞಾನದ ಮೂಲಕ, ತರಕಾರಿಗಳು ಮತ್ತು ಇತರ ಸಸ್ಯಗಳನ್ನು ಒಳಾಂಗಣದಲ್ಲಿ ಬೆಳೆದು, ಬಹಳಷ್ಟು ನೀರನ್ನು ಉಳಿಸಬಹುದು. ಸಾಂಪ್ರದಾಯಿಕ ವಿಧಾನಗಳಲ್ಲಿ, ಮಣ್ಣಿನಲ್ಲಿ ಸಸಿ ನೆಟ್ಟು ನೀರು ಹರಿಸುವ ಮೂಲಕ ನೀರು ವ್ಯರ್ಥವಾಗುತ್ತದೆ. ಆದ್ದರಿಂದ ಹೈಡ್ರೋಪೋನಿಕ್ಸ್ ಪರಿಸರ ಸ್ನೇಹಿಯಾಗಿದೆ. ಲುದಿಯಾನಾ ವಿಶ್ವವಿದ್ಯಾನಿಲಯದ ಕೆಲವು ವಿಜ್ಞಾನಿಗಳು ಈ ತಂತ್ರಜ್ಞಾನದ ಕುರಿತಂತೆ ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ. ಈ ವಿವಿಗೆ ಈಟಿವಿ ಭಾರತ ತಂಡ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ.
ಈ ತಂತ್ರಜ್ಞಾನವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಪಂಜಾಬ್ ವಿವಿಯ ವಿಜ್ಞಾನಿ ಡಾ.ರಾಕೇಶ್ ಶಾರ್ದಾ ಅವರನ್ನು ಈಟಿವಿ ಭಾರತ ತಂಡ ಭೇಟಿಯಾಗಿತ್ತು. ರಾಕೇಶ್ ಶಾರ್ದಾ ಅವರು ಹೈಡ್ರೋಪೋನಿಕ್ಸ್ನಲ್ಲಿ ಸಾಕಷ್ಟು ಸಂಶೋಧನೆಯನ್ನು ಮಾಡಿದ್ದಾರೆ. ಮಣ್ಣುರಹಿತವಾಗಿ ಟೊಮೇಟೊ, ಕ್ಯಾಪ್ಸಿಕಂ ಮತ್ತು ಇತರ ತರಕಾರಿಗಳನ್ನು ಹೈಡ್ರೋಪೋನಿಕ್ಸ್ ತಂತ್ರಜ್ಞಾನದ ಮೂಲಕ ಬೆಳೆಯಲಾಗಿದೆ. ಇದಕ್ಕೆ ಪಾಲಿ ಹೌಸ್ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ರಾಕೇಶ್ ಮಾಹಿತಿ ನೀಡಿದ್ದಾರೆ.