ಸ್ಯಾನ್ ಫ್ರಾನ್ಸಿಸ್ಕೋ :ಲಿಂಗ ಆಧಾರಿತ ತಾರತಮ್ಯ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಗೂಗಲ್ ತನ್ನ ಉದ್ಯೋಗಿಯೊಬ್ಬರಿಗೆ 1.1 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಗೂಗಲ್ ಕ್ಲೌಡ್ ಎಂಜಿನಿಯರಿಂಗ್ ನಿರ್ದೇಶಕ ಉಲ್ಕು ರೋವ್ ಎಂಬುವರು ತಮ್ಮ ಮೇಲೆ ಲಿಂಗಾಧಾರಿತ ಅಸಮಾನತೆ ಎಸಗಲಾಗಿದೆ ಎಂದು ಮೊಕದ್ದಮೆ ಹೂಡಿದ್ದರು. ತಮಗಿಂತಲೂ ಕಡಿಮೆ ಅನುಭವ ಹೊಂದಿರುವ ಪುರುಷ ಉದ್ಯೋಗಿಗಳಿಗೆ ತಮಗಿಂತ ಹೆಚ್ಚು ವೇತನ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ದೂರು ಸಲ್ಲಿಸಿದ್ದಕ್ಕಾಗಿ ಕಂಪನಿ ತಮ್ಮ ಬಡ್ತಿಗಳನ್ನು ಕೂಡ ತಡೆಹಿಡಿದಿದೆ ಎಂದು ಅವರು ಹೇಳಿದ್ದರು.
ಈ ಪ್ರಕರಣದಲ್ಲಿ ದಂಡನಾತ್ಮಕ ಹಾನಿ ಮತ್ತು ನೋವು - ಸಂಕಟ ಎರಡೂ ವಿಷಯಗಳಲ್ಲಿ ದಂಡ ಪಾವತಿಸುವಂತೆ ಗೂಗಲ್ಗೆ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ಬ್ಲೂಮ್ಬರ್ಗ್ ಲಾ ವರದಿ ಮಾಡಿದೆ. ರೋವ್ ಪ್ರಕರಣದಲ್ಲಿ, ಗೂಗಲ್ ಲಿಂಗ ಆಧಾರಿತ ತಾರತಮ್ಯವನ್ನು ಮಾಡಿದೆ ಎಂದು ನ್ಯಾಯಾಧೀಶರು ನಿರ್ಧರಿಸಿದ್ದಾರೆ. ರೋವ್ ಅವರು 2017 ರಲ್ಲಿ ಗೂಗಲ್ನಲ್ಲಿ ಕೆಲಸ ಪ್ರಾರಂಭಿಸಿದಾಗ 23 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದರು.
ಲೈಂಗಿಕ ಕಿರುಕುಳ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡದ ಆರೋಪದಲ್ಲಿ 2018ರಲ್ಲಿ ಸುಮಾರು 20 ಸಾವಿರ ಉದ್ಯೋಗಿಗಳು ಕಂಪನಿಯ ವಿರುದ್ಧ ಭಾರಿ ಪ್ರತಿಭಟನೆ ಮಾಡಿದ್ದರು. ಗೂಗಲ್ನ ಹಿರಿಯ ಅಧಿಕಾರಿಗಳ ವಿರುದ್ಧ, ವಿಶೇಷವಾಗಿ ಆಂಡ್ರಾಯ್ಡ್ ಸೃಷ್ಟಿಕರ್ತ ಆಂಡಿ ರೂಬಿನ್ ವಿರುದ್ಧ ಲೈಂಗಿಕ ದುರ್ನಡತೆ ಆರೋಪಗಳ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾದ ಲೇಖನದ ನಂತರ ಈ ಪ್ರತಿಭಟನೆಗಳು ನಡೆದಿದ್ದವು. ನಂತರ ಅವರು ಈ ಆರೋಪಗಳನ್ನು ನಿರಾಕರಿಸಿದ್ದರು.