ಹೈದರಾಬಾದ್: ಜಗತ್ತಿನಲ್ಲಿ ಬೆಳವಣಿಗೆ ಹೊಂದುತ್ತಿರುವ ನೂತನ ತಂತ್ರಜ್ಞಾನಗಳಾದ ಮಷಿನ್ ಲರ್ನಿಂಗ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಮುಂತಾದುವು ತಮ್ಮ ವೃತ್ತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗುತ್ತಿವೆ ಎಂದು ಭಾರತದ ಡಿಜಿಟಲ್ ಕ್ಷೇತ್ರದ ಶೇ.67 ರಷ್ಟು ಉದ್ಯೋಗಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ಗಾರ್ಟನರ್ ಇಂಕ್ ನಡೆಸಿದ ಸಮೀಕ್ಷೆ ತಿಳಿಸಿದೆ.
ಬ್ರಿಟನ್ ಹಾಗೂ ಅಮೆರಿಕಗಳ ನಂತರ ಭಾರತವೇ ವಿಶ್ವದ ಅತಿ ಹೆಚ್ಚು ಡಿಜಿಟಲ್ ಕೌಶಲ್ಯ ಹೊಂದಿರುವ ದೇಶವಾಗಿದೆ ಎಂದು 'ದಿ ಗಾರ್ಟನರ್-2019 ಡಿಜಿಟಲ್ ವರ್ಕಫೋರ್ಸ್ ಸರ್ವೆ' ಹೇಳಿದೆ. ತಮ್ಮ ವೃತ್ತಿ ನಿರ್ವಹಣೆಗೆ ಸಂಬಂಧಿಸಿದಂತೆ ಹೊಸ ಡಿಜಿಟಲ್ ತಂತ್ರಜ್ಞಾನಗಳನ್ನು ಕಲಿಯಲು ಹಾಗೂ ಅಳವಡಿಸಿಕೊಳ್ಳಲು ಉತ್ಸುಕವಾಗಿರುವ ಅತಿ ಹೆಚ್ಚು ಸಂಖ್ಯೆಯ ಝೆಡ್-ಜನರೇಶನ್ (Gen Z) ಯುವ ಉದ್ಯೋಗಿಗಳನ್ನು ಭಾರತ ಹೊಂದಿರುವುದೇ ಇದಕ್ಕೆ ಕಾರಣವಾಗಿದೆ.
ದೇಶದ ಶೇ.27 ರಷ್ಟು ಡಿಜಿಟಲ್ ಕ್ಷೇತ್ರದ ಉದ್ಯೋಗಿಗಳು ವೃತ್ತಿ ಸಂಬಂಧಿತ ಡಿಜಿಟಲ್ ತಂತ್ರಜ್ಞಾನದಲ್ಲಿ ನೈಪುಣ್ಯತೆ ಸಾಧಿಸಿದವರಾಗಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. "ನೂತನ ತಂತ್ರಜ್ಞಾನಗಳ ಕಲಿಕೆಯಿಂದ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಹಾಗೂ ಹೆಚ್ಚು ಸಂಬಳದ ಕೆಲಸ ಸಿಗುತ್ತವೆ ಎಂದು ಪ್ರತಿ ಹತ್ತರಲ್ಲಿ ಏಳು ಜನ ಡಿಜಿಟಲ್ ಉದ್ಯೋಗಿಗಳು ಅಭಿಪ್ರಾಯಪಡುತ್ತಾರೆ," ಎನ್ನುತ್ತಾರೆ ಗಾರ್ಟನರ್ ಸಂಸ್ಥೆಯ ಮುಖ್ಯ ಸಂಶೋಧನಾ ವಿಶ್ಲೇಷಕಿ ರಶ್ಮಿ ಚೌಧರಿ.