ಇಸ್ಲಾಮಾಬಾದ್(ಪಾಕಿಸ್ತಾನ): ನೆರೆಯ ರಾಷ್ಟ್ರವಾದ ಪಾಕಿಸ್ತಾನವನ್ನು ಅಣ್ವಸ್ತ್ರ ಸಹಿತ ರಾಷ್ಟ್ರವನ್ನಾಗಿ ಮಾಡಿದ, ಪಾಕ್ ಅಣ್ವಸ್ತ್ರ ಯೋಜನೆಯ ಪಿತಾಮಹ ಎಂದೇ ಕರೆಯಲ್ಪಡುವ ಎ.ಕ್ಯೂ. ಖಾನ್ (ಅಬ್ದುಲ್ ಖಾದಿರ್ ಖಾನ್) ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ.
85 ವರ್ಷ ವಯಸ್ಸಿನ ಅಬ್ದುಲ್ ಖಾದಿರ್ ಖಾನ್ ಅವರಿಗೆ ಆರೋಗ್ಯ ಸಮಸ್ಯೆಯಿದ್ದು, ಬೆಳಗ್ಗೆ 7 ಗಂಟೆಗೆ ಇಸ್ಲಾಮಾಬಾದ್ನ ಖಾನ್ ರಿಸರ್ಚ್ ಲ್ಯಾಬೋರೇಟರೀಸ್ (KRL) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಸಿರಾಟ ಸಂಬಂಧಿ ಸಮಸ್ಯೆಯಿಂದ ಅವರನ್ನು ಮುಂಜಾನೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನಹೊಂದಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಅಬ್ದುಲ್ ಖಾದಿರ್ ಖಾನ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪಾಕ್ ರಕ್ಷಣಾ ಸಚಿವ ಪರ್ವೇಜ್ ಖತ್ತಕ್ ಇದು ದೇಶಕ್ಕೆ ಬಹುದೊಡ್ಡ ನಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ನೀಡಿರುವ ಕೊಡುಗೆಯನ್ನು ರಾಷ್ಟ್ರ ಸ್ಮರಿಸುತ್ತದೆ ಎಂದಿದ್ದಾರೆ.