ಹೈದರಾಬಾದ್: ಬೆಂಗಳೂರಿನ ಹೃದಯ ಭಾಗದಲ್ಲಿ ಅಮೆರಿಕದ ಟೆಕ್ ದಿಗ್ಗಜ ಆ್ಯಪಲ್ ಕಂಪನಿ ತನ್ನ ಹೊಸ ಕಚೇರಿ ತೆರೆಯುವ ಮೂಲಕ ಭಾರತದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸುತ್ತಿರುವುದಾಗಿ ಘೋಷಿಸಿದೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪದ ಮಿನ್ಸ್ಕ್ ಸ್ಕ್ವೇರ್ನಲ್ಲಿ ಈ ಕಚೇರಿ ತೆರಯಲಾಗಿದೆ. 1,200 ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 15 ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಲ್ಯಾಬ್ ಸ್ಪೇಸ್, ಸಹಯೋಗ ಪ್ರದೇಶ ಮತ್ತು ವೆಲ್ನೆಸ್, ಕೆಫೆ ಮ್ಯಾಕ್ಸ್ ಮುಂತಾದವು ಇರಲಿದೆ.
ಈ ಕುರಿತು ಮಾತನಾಡಿರುವ ಆ್ಯಪಲ್ ವಕ್ತಾರರು, "ನಮ್ಮ ಪ್ರತಿಭಾವಂತ ತಂಡದ ಅನೇಕರ ಮನೆ ಬೆಂಗಳೂರು. ನಮ್ಮ ಸಾಫ್ಟ್ವೇರ್, ಹಾರ್ಡ್ವೇರ್ ತಂತ್ರಜ್ಞಾನ, ಆಪರೇಷನ್ಸ್, ಗ್ರಾಹಕ ಬೆಂಬಲ ವ್ಯವಸ್ಥೆ ಇಲ್ಲಿಯೇ ಇದೆ. ಈ ಹೊಸ ಉದ್ಯೋಗ ಸ್ಥಳವು ವೇಗದ ಅವಿಷ್ಕಾರ, ಕ್ರಿಯಾತ್ಮಕತೆ ಮತ್ತು ಸಂಪರ್ಕವನ್ನು ಸೃಷ್ಟಿಸುತ್ತದೆ. ನಮ್ಮ ತಂಡದ ಸಹಯೋಗಕ್ಕೆ ಇದು ಅದ್ಬುತ ಜಾಗವಾಗಿದೆ" ಎಂದು ಹೇಳಿರುವುದಾಗಿ ಐಎಎನ್ಎಸ್ ವರದಿ ಮಾಡಿದೆ.
ಕಚೇರಿಯ ಒಳಾಂಗಣದ ಗೋಡೆ ಮತ್ತು ಫ್ಲೋರಿಂಗ್ ಕಲ್ಲು, ಮರ, ಫ್ಯಾಬ್ರಿಕ್ ವಿನ್ಯಾಸಕ್ಕೆ ಸ್ಥಳೀಯ ವಸ್ತುಗಳನ್ನು ಬಳಕೆ ಮಾಡಲಾಗಿದೆ. ಸ್ಥಳೀಯ ಗಿಡಗಳಿಂದಲೇ ಅಲಂಕರಿಸಲಾಗಿದೆ. ಹೊಸ ಕಚೇರಿಯು ಶಕ್ತಿ ಸಂರಕ್ಷಣೆಯ ಪ್ರಯೋಗ ಹೊಂದಿದೆ. ಇಂಗಾಲ ಮುಕ್ತವಾಗಿ ಶೇ.100ರಷ್ಟು ನವೀಕರಿಸಬಹುದಾದ ಶಕ್ತಿ ಹೊಂದಿದ್ದು, ಪರಿಸರಸ್ನೇಹಿ ವಿನ್ಯಾಸ (ಎಲ್ಇಇಡಿ)ದೊಂದಿಗೆ ನಿರ್ಮಾಣಗೊಂಡಿದೆ. ಆ್ಯಪಲ್ 2020ರಿಂದಲೂ ತಮ್ಮ ಕಾರ್ಪೊರೇಟ್ ಕಾರ್ಯಾಚರಣೆಯಲ್ಲಿ ಇಂಗಾಲದ ಕುರಿತು ತಟಸ್ಥ ನೀತಿ ಅನುಸರಿಸುತ್ತಿದೆ. ಎಲ್ಲಾ ಆ್ಯಪಲ್ ಸೌಲಭ್ಯಗಳು ಶೇ.100ರಷ್ಟು ನವೀಕರಿಸಬಹುದಾದ ಶಕ್ತಿಯ ಸೌಲಭ್ಯವನ್ನು 2018ರಿಂದ ಹೊಂದಿದೆ.
ಈಗಾಗಲೇ ಮುಂಬೈ, ಹೈದರಾಬಾದ್, ಗುರುಗ್ರಾಮದಲ್ಲಿ ಆ್ಯಪಲ್ ಕಚೇರಿ ಹೊಂದಿದ್ದು, ಇದೀಗ ಬೆಂಗಳೂರಿನ ಕಚೇರಿಯು ದೇಶದಲ್ಲಿ ಆ್ಯಪಲ್ನ 25 ವರ್ಷದ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ. ಭಾರತದಲ್ಲಿ ಆ್ಯಪಲ್ 3 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಉತ್ಪಾದನೆ, ಪೂರೈಕೆ ರೀತಿಯ ಎಲ್ಲಾ ರೀತಿಯ ಬೆಂಬಲದೊಂದಿಗೆ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಬೆಂಗಳೂರಿನಲ್ಲಿ ಆ್ಯಪಲ್ ಸಾಫ್ಟ್ವೇರ್, ಹಾರ್ಡ್ವೇರ್, ಸರ್ವೀಸ್, ಐಎಸ್ ಆ್ಯಂಡ್ ಟಿ, ಆಪರೇಷನ್ಸ್, ಗ್ರಾಹಕರ ಬೆಂಬಲ ಮತ್ತು ಇತರೆ ವ್ಯಾಪ್ತಿಯಲ್ಲಿ ಉದ್ಯಮ ನಿರ್ವಹಣೆ ಮಾಡಲಿದೆ. ದೇಶದಲ್ಲಿ ಆ್ಯಪಲ್ನ ಸ್ಥಳೀಯ ಉತ್ಪಾದನೆಯೂ ದ್ವಿಗುಣಗೊಂಡಿದ್ದು, 2020ರಲ್ಲಿ 1 ಲಕ್ಷ ಕೋಟಿ ಐಫೋನ್ ಜೋಡಣೆ ಮಾಡಿದೆ ಎಂದು ವರದಿ ತಿಳಿಸಿದೆ.(ಐಎಎನ್ಎಸ್)
ಇದನ್ನೂ ಓದಿ: ಮಾರುಕಟ್ಟೆಗೆ ಬರ್ತಿದೆ ಐಫೋನ್ 16: ಹಲವು ವಿಶೇಷತೆಗಳು