ಕರ್ನಾಟಕ

karnataka

By

Published : Sep 21, 2022, 8:02 PM IST

ETV Bharat / opinion

ಕೇರಳ ಲಾಟರಿ ಟಿಕೆಟ್‌.. ಆನ್​ಲೈನ್​ ಹಾಗೂ ಹೊರ ರಾಜ್ಯದವರು ಖರೀದಿಸಬಹುದೇ, ಗೆದ್ದ ಹಣ ಪಡೆಯುವುದು ಹೇಗೆ?

ಕೇರಳದ ಓಣಂ ಬಂಪರ್ ಲಾಟರಿಯಲ್ಲಿ ಆಟೋ ರಿಕ್ಷಾ ಚಾಲಕ 25 ಕೋಟಿ ರೂಪಾಯಿ ಹಣ ಗೆದ್ದು ದೇಶದ ಗಮನ ಸೆಳೆದಿದ್ದಾರೆ. ಕೇರಳ ಲಾಟರಿ ಟಿಕೆಟ್‌ಗಳನ್ನು ಹೊರ ರಾಜ್ಯದವರು ಖರೀದಿಸಬಹುದೇ ಹಾಗೂ ಆನ್‌ಲೈನ್​ನಲ್ಲಿ ಲಾಟರಿ ಟಿಕೆಟ್‌ ಲಭ್ಯ ಇವೆಯೇ ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ.

who-can-take-and-win-prize-money-from-kerala-lottery-explainer
ಕೇರಳ ಲಾಟರಿ ಟಿಕೆಟ್‌.. ಆನ್​ಲೈನ್​ ಹಾಗೂ ಹೊರ ರಾಜ್ಯದವರು ಖರೀದಿಸಬಹುದೇ, ಗೆದ್ದ ಹಣ ಪಡೆಯುವುದು ಹೇಗೆ?

ತಿರುವನಂತಪುರಂ (ಕೇರಳ):ಕೇರಳದ ಓಣಂ ಬಂಪರ್ ಲಾಟರಿಯಲ್ಲಿ ದಾಖಲೆಯ 25 ಕೋಟಿ ಹಣ ಗೆದ್ದ ವಿಷಯ ದೇಶಾದ್ಯಂತ ಸದ್ದು ಮಾಡುತ್ತಿದೆ. ದೇಶದ ವಿವಿಧ ರಾಜ್ಯಗಳ ಜನತೆಯೂ ಲಾಟರಿ ಹಣದ ಬಗ್ಗೆ ಅಶ್ಚರ್ಯ ಪಡುತ್ತಿದ್ದಾರೆ. ಲಾಟರಿ ಟಿಕೆಟ್​ ಖರೀದಿ ಮಾಡುವುದು ಹೇಗೆ ಹಾಗೂ ಗೆದ್ದ ಮೇಲೆ ಹಣ ಪಡೆಯುವುದು ಹೇಗೆ ಎಂಬ ಚರ್ಚೆಯೂ ಮುನ್ನಲೆಗೆ ಬಂದಿದೆ. ಹೀಗಾಗಿ ಕೇರಳ ಸರ್ಕಾರ ನಡೆಸುತ್ತಿರುವ ಈ ಲಾಟರಿಗಳ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ಇತರ ರಾಜ್ಯಗಳ ಜನರು ಕೇರಳ ಲಾಟರಿ ಟಿಕೆಟ್‌ಗಳನ್ನು ಖರೀದಿಸಬಹುದೇ?...ಕೇರಳದಲ್ಲಿ ಜಾರಿ ಇರುವ ಲಾಟರಿ ನಿಯಂತ್ರಣ ಕಾಯ್ದೆಯ ಪ್ರಕಾರ ಈ ಲಾಟರಿ ಟಿಕೆಟ್‌ಗಳನ್ನು ಕೇರಳದ ಹೊರಗೆ ಮಾರಾಟ ಮಾಡುವಂತಿಲ್ಲ. ಆದರೆ, ಬೇರೆ ರಾಜ್ಯಗಳ ಜನರು ಕೇರಳಕ್ಕೆ ಬಂದು ಟಿಕೆಟ್ ಖರೀದಿಸಬಹುದು. ಅವರು ಬಹುಮಾನದ ಹಣವನ್ನು ಗೆದ್ದರೆ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು ಮತ್ತು ಬಹುಮಾನದ ಹಣವನ್ನು ಪಡೆಯಬಹುದು.

ಆನ್‌ಲೈನ್​ನಲ್ಲಿ ಲಾಟರಿ ಟಿಕೆಟ್‌ ಖರೀದಿಸಬಹುದೇ ಅಥವಾ ಇಲ್ಲವೇ?...ಲಾಟರಿ ನಿಯಮಗಳ ಪ್ರಕಾರ ಲಾಟರಿಯಲ್ಲಿ ಗೆದ್ದ ಬಹುಮಾನವನ್ನು ಪಡೆಯಲು ಭೌತಿಕವಾಗಿ ಖರೀದಿಸಿದ ಟಿಕೆಟ್ ಮಾತ್ರವೇ ಮಾನ್ಯ. ವಿಜೇತರು ಬಹುಮಾನವನ್ನು ಪಡೆಯಲು ಲಾಟರಿ ಕಚೇರಿಯಲ್ಲಿ ಮೂಲ ಟಿಕೆಟ್​ ಅನ್ನೇ ಸಲ್ಲಿಸಬೇಕು. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಟಿಕೆಟ್‌ಗಳನ್ನು ಖರೀದಿಸುವುದು ಕಾನೂನು ಬಾಹಿರವಾಗಿದೆ.

ಟಿಕೆಟ್‌ಗಳನ್ನು ಮಾರಾಟ ಮಾಡಲು ಲಾಟರಿ ಏಜೆಂಟ್‌ಗಳು ಹಲವಾರು ವಾಟ್ಸ್​ಆ್ಯಪ್​ ಗುಂಪುಗಳನ್ನು ರಚಿಸಿರುತ್ತಾರೆ. ಆದರೆ, ಏಜೆಂಟ್‌ಗಳು ಹಾಗೂ ಗ್ರಾಹಕರ ನಡುವಿನ ವಿಶ್ವಾಸದ ಮೇಲೆಯೇ ಅವಲಂಬನೆಯಾಗಿರುತ್ತದೆಯೇ, ಹೊರತು ಇದಕ್ಕೆ ಯಾವುದೇ ಕಾನೂನು ರಕ್ಷಣೆ ಇರುವುದಿಲ್ಲ.

ಅಂದರೆ ಈ ವಾಟ್ಸ್​ಆ್ಯಪ್​ ಗುಂಪುಗಳ ಮೂಲಕ ಟಿಕೆಟ್‌ಗಳನ್ನು ಖರೀದಿಸಿ ಒಂದು ವೇಳೆ ವಂಚನೆಗೊಳಗಾದ ಅಥವಾ ಯಾವುದೇ ವಿವಾದ ಹೊಂದಿರುವ ವ್ಯಕ್ತಿಗಳಿಗೆ ಸರ್ಕಾರವು ಯಾವುದೇ ಕಾನೂನು ರಕ್ಷಣೆ ನೀಡುವುದಿಲ್ಲ. ವಿಜೇತರ ಮೂಲ ಟಿಕೆಟ್​ನ ಆಧಾರದ ಮೇಲೆ ಮಾತ್ರ ಬಹುಮಾನ ವಿತರಣೆ ಮಾಡಲಾಗುತ್ತದೆ.

ಬಹುಮಾನ ಪಡೆಯಲು ಯಾವ ದಾಖಲೆಗಳು ಬೇಕಾಗುತ್ತವೆ?...

  • 1. ಬಹುಮಾನವನ್ನು ಗೆದ್ದಿರುವ ಮೂಲ ಲಾಟರಿ ಟಿಕೆಟ್
  • 2. ನಮೂನೆ ಸಂಖ್ಯೆ VIIIರಲ್ಲಿ ಸ್ಟ್ಯಾಂಪ್ ಮಾಡಿದ ರಸೀದಿ
  • 3. ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿದ /ನೋಟರಿ ಮಾಡಿಸಿದ ಇತ್ತೀಚಿನ ಪಾಸ್‌ಪೋರ್ಟ್ ಸೈಜ್​ನ 1 ಫೋಟೋ
  • 4. ಬಹುಮಾನಿತ ಟಿಕೆಟ್‌ನ ಎರಡೂ ಬದಿಯ ದೃಢೀಕೃತ ಫೋಟೊಕಾಪಿ.
  • 5. ಪಾಸ್‌ಪೋರ್ಟ್ / ಪಡಿತರ ಚೀಟಿ / ಚುನಾವಣಾ ಗುರುತಿನ ಚೀಟಿ / ಡ್ರೈವಿಂಗ್‌ ಲೈಸನ್ಸ್​​/ ಪ್ಯಾನ್ ಕಾರ್ಡ್
  • 6. ಈ ದಾಖಲೆಗಳ ಜೊತೆಗೆ ಹಣ ಸಂಗ್ರಹಿಸುವ ಬ್ಯಾಂಕ್​​ನ ದಾಖಲೆಗಳನ್ನು ನೀಡಬೇಕಾಗುತ್ತದೆ

ಕೇರಳ ಸರ್ಕಾರದ ಯಾವ, ಎಷ್ಟು ಲಾಟರಿಗಳಿವೆ?..

ಕೇರಳ ಸರ್ಕಾರದ ಹಲವು ಲಾಟರಿ ಟಿಕೆಟ್​ಗಳು ಇದ್ದು, ಅವುಗಳನ್ನು ವಾರದ ಪ್ರತಿ ದಿನ ಡ್ರಾ ಮಾಡಲಾಗುತ್ತದೆ. ಇಲ್ಲದೇ ಆರು ಬಂಪರ್ ಲಾಟರಿಗಳು ಇದ್ದು, ಹೆಚ್ಚಿನ ಮೊತ್ತದ ಬಹುಮಾನವನ್ನೂ ಹೊಂದಿದೆ.

ಸೋಮವಾರದಂದು ಅಕ್ಷಯ, ಮಂಗಳವಾರದಂದು ಕಾರುಣ್ಯ, ಬುಧವಾರದಂದು ಕಾರುಣ್ಯ ಪ್ಲಸ್, ಗುರುವಾರ ನಿರ್ಮಲ್, ಶುಕ್ರವಾರದಂದು ಸ್ತ್ರೀಶಕ್ತಿ, ಶನಿವಾರದಂದು ವಿನ್‌ವಿನ್ ಮತ್ತು ಭಾನುವಾರದಂದು ಫಿಫ್ಟಿ ಫಿಫ್ಟಿ... ಹೀಗೆ ಇವು ದೈನಂದಿನ ಲಾಟರಿ ಟಿಕೆಟ್‌ಗಳು.

ಈ ದೈನಂದಿನ ಲಾಟರಿ ಟಿಕೆಟ್​​ಗಳಲ್ಲಿ ಫಿಫ್ಟಿ ಫಿಫ್ಟಿಯು ಒಂದು ಕೋಟಿ ರೂಪಾಯಿಯ ಅತ್ಯಧಿಕ ಪ್ರಥಮ ಬಹುಮಾನದ ಮೊತ್ತ ಹೊಂದಿದೆ. ಇತರ ಲಾಟರಿಗಳಲ್ಲೂ ಮೊದಲ ಬಹುಮಾನದ ಸುಮಾರು 1 ಕೋಟಿ ರೂಪಾಯಿವರೆಗೆ ಇದೆ. ಇದರಲ್ಲಿ ಬಂಪರ್ ಟಿಕೆಟ್‌ಗಳೆಂದರೆ ಮಾನ್ಸೂನ್ ಬಂಪರ್, ಪೂಜಾ ಬಂಪರ್, ಸಮ್ಮರ್ ಬಂಪರ್, ತಿರುವೋಣಂ ಬಂಪರ್, ವಿಷು ಬಂಪರ್ ಮತ್ತು ಕ್ರಿಸ್ಮಸ್ ಹೊಸ ವರ್ಷದ ಬಂಪರ್ ಟಿಕೆಟ್​.

ಲಾಟರಿಗಳಿಂದ ಬರುವ ಆದಾಯ ಹೇಗೆ ಬಳಕೆ ಆಗುತ್ತದೆ?...

ಲಾಟರಿ ಟಿಕೆಟ್​ಗಳ ಮಾರಾಟದಿಂದ ಕೇರಳ ಸರ್ಕಾರಕ್ಕೆ ಸಾಕಷ್ಟು ಆದಾಯ ಕೂಡ ಬರುತ್ತದೆ. ಇದರಲ್ಲಿ ಈ ಹೆಚ್ಚಿನ ಟಿಕೆಟ್‌ಗಳನ್ನು ನಿರ್ದಿಷ್ಟ ಸಾಮಾಜಿಕ ಗುರಿಗಳೊಂದಿಗೆ ಹೊರತರಲಾಗಿದೆ. ಈ ಲಾಟರಿ ಟಿಕೆಟ್ ಮಾರಾಟದಿಂದ ಬರುವ ಆದಾಯವನ್ನು ಅಂತಹ ಸಾಮಾಜಿಕ ಯೋಜನೆಗಳಿಗೆ ಬಳಸಲಾಗುತ್ತದೆ.

ಉದಾಹರಣೆಗೆ ಕಾರುಣ್ಯ ಲಾಟರಿ ಟಿಕೆಟ್‌ಗಳಿಂದ ಬರುವ ಆದಾಯವನ್ನು ಬಡ ಜನರಿಗೆ ಉಚಿತ ವೈದ್ಯಕೀಯ ನೆರವು ನೀಡಲು ಬಳಸಲಾಗುತ್ತದೆ. ಅದೇ ರೀತಿಯಾಗಿ ಸ್ತ್ರೀಶಕ್ತಿ ಲಾಟರಿ ಟಿಕೆಟ್ ಆದಾಯವನ್ನು ಮಹಿಳಾ ಸಬಲೀಕರಣ ಯೋಜನೆಗಳಿಗೆ ಬಳಸಲಾಗುತ್ತದೆ.

ಟಿಕೆಟ್​ ಮುದ್ರಣ ಮತ್ತು ಮಾರಾಟದ ಅಧಿಕಾರ ಯಾರದ್ದು?...

ಕೇರಳ ಸರ್ಕಾರದ ಲಾಟರಿ ಇಲಾಖೆಯು ರಾಜ್ಯದಲ್ಲಿ ಲಾಟರಿ ಟಿಕೆಟ್‌ಗಳ ಮುದ್ರಣ ಮತ್ತು ಮಾರಾಟದ ಅಧಿಕಾರವನ್ನು ಹೊಂದಿದೆ. ಲಾಟರಿ ಏಜೆಂಟ್‌ಗಳು, ಸಗಟು ಮತ್ತು ಚಿಲ್ಲರೆ ಎರಡೂ ಟಿಕೆಟ್‌ಗಳನ್ನು ಕಮಿಷನ್ ಆಧಾರದ ಮೇಲೆ ಮಾರಾಟ ಮಾಡಲು ಅಧಿಕಾರ ಹೊಂದಿವೆ.

ಲಾಟರಿ ನಿರ್ದೇಶಕರು ಮುದ್ರಣದ ಹೊಣೆ ಹೊತ್ತಿದ್ದಾರೆ. ಇವುಗಳ ಮುದ್ರಣ ಸಹ ಸರ್ಕಾರಿ ಮುದ್ರಣಾಲಯದಲ್ಲಿ ಮಾಡಲಾಗುತ್ತದೆ. ಈ ಟಿಕೆಟ್‌ಗಳು ಸರಣಿ ಸಂಖ್ಯೆ, ಟಿಕೆಟ್ ಬೆಲೆ, ಬಹುಮಾನದ ವಿವರಗಳು ಮತ್ತು ಡ್ರಾ ದಿನಾಂಕದಂತಹ ವಿವರಗಳನ್ನು ಹೊಂದಿರುತ್ತದೆ.

ಲಾಟರಿ ಟಿಕೆಟ್​ಗಳ ಸುರಕ್ಷತೆ ಮತ್ತು ನಕಲಿ ಟಿಕೆಟ್​​ಗಳ ಹಾವಳಿಯನ್ನು ತಡೆಗಟ್ಟಲು ಪ್ರತಿ ಟಿಕೆಟ್‌ನಲ್ಲೂ ಬಾರ್‌ಕೋಡ್ ಸಹ ಮುದ್ರಿಸಲಾಗುತ್ತದೆ. ಎಲ್ಲ ಮುದ್ರಿತ ಟಿಕೆಟ್‌ಗಳು ಮತ್ತು ಪ್ರತಿ ಏಜೆಂಟರಿಗೆ ಮಾರಾಟವಾದ ಕ್ರಮ ಸಂಖ್ಯೆಗಳ ವಿವರಗಳನ್ನು ಲಾಟರಿ ಇಲಾಖೆ ಹೊಂದಿರುತ್ತದೆ.

ಏಜೆಂಟರು ಮಾರಾಟವಾಗದ ಟಿಕೆಟ್‌ಗಳ ವಿವರಗಳನ್ನು ಡ್ರಾ ದಿನಾಂಕಕ್ಕಿಂತ ಮೊದಲೇ ಲಾಟರಿ ಇಲಾಖೆಗೆ ಹಸ್ತಾಂತರಿಸಬೇಕು. ಆಗ ಅಂತಹ ಟಿಕೆಟ್‌ಗಳನ್ನು ಲಕ್ಕಿ ಡ್ರಾದಿಂದ ತೆಗೆದುಹಾಕಲಾಗುತ್ತದೆ.

ಬಹುಮಾನದ ಹಣವನ್ನು ಹೇಗೆ ಮತ್ತು ಎಲ್ಲಿ ಸಂಗ್ರಹಿಸಬಹುದು?...

ಲಾಟರಿ ಟಿಕೆಟ್ ಡ್ರಾವನ್ನು ತಿರುವನಂತಪುರದಲ್ಲಿ ಮಾಡಲಾಗುತ್ತದೆ. ಬಹುಮಾನ ವಿಜೇತ ಟಿಕೆಟ್​ನಲ್ಲಿ ಬಂದ 5,000 ರೂಪಾಯಿವರೆಗಿನ ಬಹುಮಾನದ ಹಣವನ್ನು ಲಾಟರಿ ಏಜೆಂಟ್‌ಗಳಿಂದ ನೇರವಾಗಿ ಸಂಗ್ರಹಿಸಬಹುದು.

ಬಹುಮಾನ ಮೊತ್ತ 1 ಲಕ್ಷ ರೂಪಾಯಿ ಇದ್ದರೆ ಜಿಲ್ಲಾ ಲಾಟರಿ ಕಚೇರಿಯಿಂದ ಪಡೆಯಬಹುವುದು. ಹೆಚ್ಚಿನ ಬಹುಮಾನದ ಮೊತ್ತದ ವಿಜೇತ ಟಿಕೆಟ್‌ಗಳನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳಲ್ಲಿ ಮೂಲ ಟಿಕೆಟ್‌ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಹಣವನ್ನು ಸಂಗ್ರಹಿಸಬಹುದು.

ಪ್ರಮುಖವಾಗಿ ತಿಳಿಯಬೇಕಾದ ವಿಷಯವೆಂದರೆ ಆದಾಯ ತೆರಿಗೆ ಮತ್ತು ಏಜೆಂಟ್ ಕಮಿಷನ್ ಕಡಿತದ ನಂತರ ಉಳಿದ ಹಣ ವಿಜೇತರಿಗೆ ಸಿಗುತ್ತದೆ. ಬಹುಮಾನ ವಿಜೇತ ಟಿಕೆಟ್ ಅನ್ನು ಡ್ರಾ ದಿನಾಂಕದಿಂದ 90 ದಿನಗಳ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. 90 ದಿನಗಳ ನಂತರ ಟಿಕೆಟ್​ಅನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ:ಖುಲಾಯಿಸಿದ ಅದೃಷ್ಟ: 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದ ಆಟೋ ಡ್ರೈವರ್​

ABOUT THE AUTHOR

...view details