ಹೈದರಾಬಾದ್:7,800 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ಕರಾವಳಿ ತೀರ ಹೊಂದಿರುವ ಭಾರತೀಯ ನೌಕಾಪಡೆಯು ಎಲ್ಲಾ ಸಮಯದಲ್ಲೂ ದೇಶದ ಕಡಲ ಪ್ರದೇಶವನ್ನು ರಕ್ಷಿಸುವ ಸವಾಲು ಎದುರಿಸುತ್ತಿದೆ. ನಿರ್ಣಾಯಕ ಹಿಂದೂ ಮಹಾಸಾಗರದ ಸಮುದ್ರ ಮಾರ್ಗಗಳನ್ನು ಭದ್ರಪಡಿಸುವುದರ ಹೊರತಾಗಿ, ನೌಕಾಪಡೆಯು ಮಾದಕವಸ್ತು ಕಳ್ಳಸಾಗಣೆ, ಸಶಸ್ತ್ರ ದರೋಡೆ, ಮಾನವ ಕಳ್ಳಸಾಗಣೆ, ಭಯೋತ್ಪಾದನೆ, ಕಡಲ್ಗಳ್ಳತನ, ಸಮುದ್ರದಲ್ಲಿನ ಅಪರಾಧ ಚಟುವಟಿಕೆಗಳು, ಅಕ್ರಮ ವಲಸೆ, ಅಕ್ರಮ ಮೀನುಗಾರಿಕೆ ಮತ್ತು ನೈಸರ್ಗಿಕ ವಿಕೋಪಗಳಂತಹ ಸವಾಲುಗಳನ್ನು ಭಾರತ ಮೆಟ್ಟಿ ನಿಲ್ಲುತ್ತಿದೆ.
ಇಂಡೋ-ಪೆಸಿಫಿಕ್‌ನಲ್ಲಿ ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಯ ನಡುವೆ, ಭಾರತೀಯ ನೌಕಾಪಡೆಯು ತನ್ನ ಪ್ರಬಲ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ. ಹಡಗುಗಳು, ಜಲಾಂತರ್ಗಾಮಿ ನೌಕೆಗಳು, ವಿಮಾನವಾಹಕ ನೌಕೆಗಳು, ಎಯುವಿ, ಯುಎಸ್ವಿಎಸ್ ಹಡಗುಗಳು ಸೇರಿದಂತೆ ಪ್ರಮುಖ ಸ್ವತ್ತುಗಳನ್ನು ಸೇರಿಸುವ ಕಾರ್ಯವನ್ನು ಮುಂದುವರೆಸಿದೆ. 2035ರ ವೇಳೆಗೆ 175 ಹಡಗುಗಳ ಪಡೆಯನ್ನು ರಚಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನೂ ಆರಂಭಿಸಿದೆ. ಜೊತೆಗೆ ಆತ್ಮನಿರ್ಭರ್ ಭಾರತಕ್ಕೆ ಒತ್ತು ನೀಡಿದೆ.
ಭಾರತದ ಸಮೀಪ ಸಮುದ್ರಗಳಲ್ಲಿ ಚೀನಾದ ಯುದ್ಧನೌಕೆಗಳು: ಭಾರತೀಯ ನೌಕಾಪಡೆಯು ತನ್ನ ಕಡಲ ಕಾರ್ಯತಂತ್ರದ ದಾಖಲೆ (2004-2015) ಮೂಲಕ ತನ್ನ ಪಾತ್ರವನ್ನು ವಿವರಿಸುವತ್ತ ಕ್ರಮಗಳನ್ನು ಕೈಗೊಂಡಿದೆ. ಕಡಲ ಕ್ಷೇತ್ರದಲ್ಲಿ ನವದೆಹಲಿಯ ದೊಡ್ಡ ಸವಾಲು ನಿಸ್ಸಂದೇಹವಾಗಿ ಬೀಜಿಂಗ್ ಆಗಿದೆ. ಭಾರತವನ್ನು ಮೂಲೆಗುಂಪು ಮಾಡಲು ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ ಮತ್ತು ಥಾಯ್ಲೆಂಡ್ ಮೇಲೆ ಪ್ರಭಾವ ಬೀರಲು ಚೀನಾ ಪ್ರಯತ್ನಿಸಿದೆ.
ಭಾರತದ ಸಮೀಪ ಸಮುದ್ರಗಳಲ್ಲಿ ಚೀನಾದ ಯುದ್ಧನೌಕೆಗಳು ಮತ್ತು ಪರಮಾಣು ಜಲಾಂತರ್ಗಾಮಿ ನೌಕೆಗಳ ನಿಯೋಜನೆ ಮಾತ್ರವಲ್ಲದೇ ಚೀನಾದ ಮೀನುಗಾರಿಕಾ ಸೇನೆ ಮತ್ತು ಹೆಚ್ಚುತ್ತಿರುವ ಚೀನಾದ ಸಂಶೋಧನಾ ಹಡಗುಗಳ ಬಗ್ಗೆ ಭಾರತವು ಚಿಂತಿಸುತ್ತಿದೆ. ಇದಲ್ಲದೆ, ಪ್ರಸ್ತುತ, ಚೀನಾದ ಸಮುದ್ರದ ಒಳಗಿನ ಉಪಸ್ಥಿತಿಯು ಕಳವಳಕ್ಕೆ ಪ್ರಮುಖ ಕಾರಣವಾಗಿದೆ. ಡಿಸೆಂಬರ್ 2019ರಿಂದ ಫೆಬ್ರವರಿ 2020ರವರೆಗೆ, ಚೀನಾದ ನೌಕಾಪಡೆಯು ಐಒಆರ್ನಲ್ಲಿ 12 ನೀರೊಳಗಿನ ಡ್ರೋನ್‌ಗಳ ಫ್ಲೀಟ್ ನಿಯೋಜಿಸಿದೆ.
ಜನವರಿ 2023ರಲ್ಲಿ, ಇದು ವಿಶ್ವದ ಮೊದಲ ಮಾನವರಹಿತ ಡ್ರೋನ್ ಕ್ಯಾರಿಯರ್ ಝು ಹೈ ಯುನ್ ಅನ್ನು ಪ್ರಾರಂಭಿಸಿತ್ತು. ಇದನ್ನು ದೂರದಿಂದಲೇ ನಿಯಂತ್ರಿಸಬಹುದು ಮತ್ತು ಸ್ವಾಯತ್ತವಾಗಿ ನ್ಯಾವಿಗೇಟ್ ಮಾಡಬಹುದು. ಚೀನಾ ಪ್ರಸ್ತುತ ನೌಕಾ ಗುಪ್ತಚರ ಕಾರ್ಯಾಚರಣೆಗಳಿಗಾಗಿ ಯುಯುವಿಗಳನ್ನು ಬಳಸುತ್ತಿದೆ. ಇವುಗಳನ್ನು ಪ್ರಮುಖ ಚೆಕ್‌ಪಾಯಿಂಟ್‌ಗಳಲ್ಲಿ ನಿಯೋಜಿಸಿದರೆ, ಗಂಭೀರವಾದ ಭೌಗೋಳಿಕ ರಾಜಕೀಯ ಮತ್ತು ಕಾರ್ಯತಂತ್ರದ ಪರಿಣಾಮ ಬೀರುವ ಸಾಧ್ಯತೆಯಿದೆ.
41 ಹಡಗುಗಳ ನಿರ್ಮಾಣ:ಭಾರತೀಯ ನೌಕಾಪಡೆಯು ಸಮುದ್ರಗಡಿಯನ್ನು ಮತ್ತಷ್ಟು ಭದ್ರಪಡಿಸುವ ಕಾರ್ಯಕ್ಕೆ ಪ್ರಯತ್ನಿಸಿದೆ. 2035ರ ವೇಳೆಗೆ 175-ಹಡಗು ಪಡೆಗಳನ್ನು ರಚಿಸಲು ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ. ಆತ್ಮನಿರ್ಭರ್ ಭಾರತಕ್ಕೆ ಒತ್ತು ಕೊಡಲಾಗಿದ್ದು, ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕ್ರಮೇಣವಾಗಿ ಬಿಟ್ಟುಬಿಡಲು ನೌಕಾಪಡೆ ನಿರ್ಧರಿಸಿದೆ. ನಿರ್ಮಾಣ ಹಂತದಲ್ಲಿರುವ 43 ಹಡಗುಗಳ ಪೈಕಿ, 41 ಹಡಗುಗಳನ್ನು ಭಾರತೀಯ ಹಡಗುಕಟ್ಟೆಗಳಲ್ಲಿ ನಿರ್ಮಾಣವಾಗುತ್ತಿವೆ. ಇನ್ನೂ 49 ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಪ್ರಸ್ತಾವ ಇವೆ.
ಸಾಗರ ಮೂಲಸೌಕರ್ಯ:ನೌಕಾಪಡೆಯ ಸಾಗರ ಮೂಲಸೌಕರ್ಯ ದೃಷ್ಟಿಕೋನ ಯೋಜನೆ (2012-27) ಪ್ರಕಾರ, ಐದು ಕಲ್ವರಿ ವರ್ಗದ ಜಲಾಂತರ್ಗಾಮಿ ನೌಕೆಗಳ ಎಂಟ್ರಿ ನಂತರವೂ, ಭಾರತೀಯ ನೌಕಾಪಡೆಯು 2030ರ ವೇಳೆಗೆ ಸೇರ್ಪಡೆಗೆ ನಿಗದಿತ 24ಕ್ಕಿಂತ ಎಂಟು ಹಡಗುಗಳ ಕೊರತೆಯಿದೆ. ಭಾರತವು ಪ್ರಸ್ತುತ ಎರಡು ವಿಮಾನವಾಹಕ ನೌಕೆಗಳನ್ನು ಹೊಂದಿದ್ದು, INS ವಿಕ್ರಮಾದಿತ್ಯ ಮತ್ತು INS ವಿಕ್ರಾಂತ್ ಕೆಲಸ ಮಾಡುತ್ತಿದೆ. ಇದಲ್ಲದೆ, ನೌಕಾಪಡೆಗೆ ಭವಿಷ್ಯಕ್ಕಾಗಿ ಯುಎಸ್ವಿಗಳು ಮತ್ತು ಯುಯುವಿಗಳ ತುರ್ತು ಅವಶ್ಯಕತೆಯಿದೆ. ಆದ್ದರಿಂದ, 2021 ರಿಂದ 2030 ರವರೆಗೆ ಮಾನವರಹಿತ ಪ್ಲಾಟ್‌ಫಾರ್ಮ್‌ಗಳ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲು ಭಾರತವು, ನೌಕಾಪಡೆಗಾಗಿ ಸಮಗ್ರ ಮಾನವರಹಿತ ಮಾರ್ಗಸೂಚಿ ಪ್ರಾರಂಭಿಸಿತು. ಯುದ್ಧನೌಕೆಗಳಿಗಾಗಿ 40 ನೌಕಾ ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು (NUAS) ತಯಾರಿಸಲು ಭಾರತೀಯ ನೌಕಾಪಡೆಯು 2022ರಲ್ಲಿ ಜಾಗತಿಕ ಟೆಂಡರ್ ಕರೆದಿತ್ತು.