ಕರ್ನಾಟಕ

karnataka

ETV Bharat / opinion

ವಿಶೇಷ ಲೇಖನ: 'ಸರ್ಕಾರದ ಸಾಲ ಕತ್ತಿಯಂಚಿನ ಮೇಲಿನ ನಡಿಗೆ' - Dr. S. Ananth

ಕೋವಿಡ್​ ಲಾಕ್​ಡೌನ್​ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಭಾರತದ ರಾಜ್ಯಗಳು ದಿನದಿಂದ ದಿನಕ್ಕೆ ಹೆಚ್ಚಿನ ಬಡ್ಡಿ ದರಲ್ಲಿ ಸಾಲ ಪಡೆಯುತ್ತಿವೆ. ಸಾಲದ ವಿಷಚಕ್ರದಲ್ಲಿ ಭಾರತ ಸಿಲುಕಿರುವ ಸನ್ನಿವೇಶದ ಕುರಿತು ಆರ್ಥಿಕ ತಜ್ಞ ಡಾ. ಎಸ್‌.ಅನಂತ್‌ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

Government Borrowings
ಸರ್ಕಾರದ ಸಾಲ

By

Published : Jul 30, 2020, 1:33 PM IST

ಕಳೆದ ಎರಡು ದಶಕಗಳಲ್ಲಿ ಭಾರತದ ಆರ್ಥಿಕತೆ ಭಾರೀ ಪ್ರಗತಿ ಕಂಡಿದ್ದಕ್ಕೆ ರಾಜ್ಯ, ಕೇಂದ್ರ, ಸಾರ್ವಜನಿಕ ವಲಯ, ಖಾಸಗಿ ವಲಯ ಮತ್ತು ಕೌಟುಂಬಿಕ ಮಟ್ಟದಲ್ಲಿ ಸಾಲ ವ್ಯಾಪಕ ಪ್ರಮಾಣದಲ್ಲಿ ಪಡೆದಿರುವುದೇ ಕಾರಣ. ಆದರೆ, ಈಗ ಲಾಕ್‌ಡೌನ್‌ನಿಂದ ಭಾರಿ ಪರಿಣಾಮ ಎದುರಾಗಿದೆ ಎಂದು ಕಂಡು ಬಂದರೂ, ಸಾಲ ಹೊಂದಿರುವ ರಾಜ್ಯಗಳಿಗೆ ಇದು ಅತ್ಯಂತ ಅನುಕೂಲಕರವಾಗಿಯೂ ಪರಿಣಮಿಸಿದೆ. ಲಾಕ್‌ಡೌನ್‌ಗೂ ಮೊದಲು ಕೆಲವು ರಾಜ್ಯಗಳು ಬಹುತೇಕ ದಿವಾಳಿ ಅಂಚಿಗೆ ಬಂದಿದ್ದವು. ಇದಕ್ಕೆ ಬಹುತೇಕವಾಗಿ ತಪ್ಪಾದ ನಿರ್ವಹಣೆ ಮತ್ತು ಮತ ಬ್ಯಾಂಕ್ ರಾಜಕೀಯವೇ ಕಾರಣವಾಗಿತ್ತು. ಮತ ಬ್ಯಾಂಕ್ ರಾಜಕೀಯದಿಂದಾಗಿ ಮತಗಳಿಗೆಯ ಗುರಿಯನ್ನು ಇಟ್ಟುಕೊಂಡು ಜನರಿಗೆ ಉಚಿತವಾಗಿ ಸರ್ಕಾರಗಳು ಹಣ ಹಂಚಿದ್ದವು. ದೀರ್ಘಕಾಲದಲ್ಲಿ ಅಪಾಯಕರವಾದ ಈ ಎಲ್ಲ ಯೋಜನೆಗಳನ್ನು ‘ಜನರ ಕಲ್ಯಾಣ’ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲಾಗುತ್ತಿದೆ.

ರಾಜ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಡ್ಡಿ ದರಲ್ಲಿ ಸಾಲ ಪಡೆಯುತ್ತಿವೆ. ಹಲವು ಬಾರಿ ಹಳೆಯ ಸಾಲಗಳ ಮರುಪಾವತಿ ಮಾಡಲು ಅಥವಾ ಉದ್ಯೋಗಗಳನ್ನು ಸೃಷ್ಟಿಸುವುದರ ಬದಲಿಗೆ ಮುಂದಿನ ಬಾರಿ ತಮಗೆ ಚುನಾವಣೆಯಲ್ಲಿ ಗೆಲ್ಲಲು ಅವಕಾಶ ಮಾಡಿಕೊಡುವ ಸ್ಕೀಮ್‌ಗಳಿಗೆ ಹಣ ಒದಗಿಸಲು ಇಂತಹ ಸಾಲಗಳನ್ನು ಸರ್ಕಾರಗಳು ಪಡೆಯುತ್ತಿವೆ. ಆದರೆ, ಕೋವಿಡ್‌ನಿಂದ ಉಂಟಾದ ಲಾಕ್‌ಡೌನ್‌ ಈ ರಾಜ್ಯಗಳಿಗೆ ಇಂಥ ಬೇಜವಾಬ್ದಾರಿ ವರ್ತನೆಯನ್ನು ಮುಂದುವರಿಸಲು ಒಂದು ನೆಪವನ್ನು ನೀಡಿದೆ.

ಸಾಲದ ಪರ್ವ

2019-20 ರ ಅವಧಿಯಲ್ಲಿ, ಕೇಂದ್ರ ಸರ್ಕಾರವು 7 ಲಕ್ಷ ಕೋಟಿ ರೂ. ಸಾಲ ಪಡೆದಿದೆ ಮತ್ತು ರಾಜ್ಯಗಳು ಒಟ್ಟಾರೆಯಾಗಿ 6.3 ಲಕ್ಷ ಕೋಟಿ ರೂ. ಸಾಲ ಪಡೆದಿದೆ. ಅಂದರೆ, ಅಂದಾಜಿಸಿದ್ದಕ್ಕಿಂತ ತುಂಬಾ ಹೆಚ್ಚಿನ ಮೊತ್ತದ ಸಾಲವನ್ನು ಪಡೆದಿವೆ. ಕೇಂದ್ರ ಸರ್ಕಾರವು ಶೇ. 80 ರಷ್ಟು ಸಾಲವನ್ನು ಹಣಕಾಸು ಮಾರುಕಟ್ಟೆಯಿಂದ ಪಡೆದಿದೆ. ಇದರಲ್ಲಿ ಬ್ಯಾಂಕ್‌ಗಳು, ವಿಮೆ ಕಂಪನಿಗಳು, ಮ್ಯೂಚುವಲ್ ಫಂಡ್‌ಗಳು, ಪ್ರಾವಿಡೆಂಟ್ ಫಂಡ್‌ಗಳು, ಸಣ್ಣ ಉಳಿತಾಯ ಇತ್ಯಾದಿ ಸೇರಿವೆ. ಕೋವಿಡ್ ನಂತರ, ಈ ಹಣಕಾಸು ವರ್ಷದಲ್ಲಿ 12 ಲಕ್ಷ ಕೋಟಿ ರೂ. ಸಾಲ ಪಡೆಯುವುದಾಗಿ ಘೋಷಣೆ ಮಾಡಿದೆ. ಇದು ಬಜೆಟ್ ಅಂದಾಜು 6 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ದುಪ್ಪಟ್ಟಾಗಿದೆ.

ಆದರೆ, ಮೊದಲ ಮೂರು ತಿಂಗಳಲ್ಲಿ ಕೇಂದ್ರ 4.5 ಲಕ್ಷ ಕೋಟಿ ರೂ.ಗಳನ್ನು ಈಗಾಗಲೇ ಸಾಲ ಪಡೆದಿದೆ. ರಾಜ್ಯಗಳು ಈಗಾಗಲೇ ರಾಜ್ಯ ಅಭಿವೃದ್ಧಿ ಸಾಲಗಳ ರೂಪದಲ್ಲಿ 1.8 ಲಕ್ಷ ಕೋಟಿ ರೂ. ಪಡೆದಿವೆ. ಜೊತೆಗೆ ಆರ್‌ಬಿಐ ಬೆಂಬಲದ ಭಾಗವಾಗಿ ಇನ್ನೊಂದು 60 ಸಾವಿರ ಕೋಟಿ ರೂ. ಅನ್ನು ಪಡೆದಿದೆ. ಹೀಗಾಗಿ ಸಾಲದ ಅಂದಾಜನ್ನು ಕೂಡ ಮೀರುವ ಲಕ್ಷಣ ಕಂಡುಬರುತ್ತಿದೆ. ಸರ್ಕಾರದ ಅಂದಾಜಿನ ಪ್ರಕಾರ ಸಾಲದಿಮದ ಜಿಡಿಪಿ ಅನುಪಾತವು ಪ್ರಸ್ತುತ ಶೇ. 68 ರಿಂದ ಶೇ. 86 ಕ್ಕೆ ಏರಿಕೆ ಕಾಣುವ ನಿರೀಕ್ಷೆಯಿದೆ. ಭಾರತದಂತಹ ದೇಶದಲ್ಲಿ ಸಾಲ – ಜಿಡಿಪಿ ಅನುಪಾತದ ಬಳಕೆ ಉಪಯುಕ್ತವಲ್ಲ. ಅದರಲ್ಲೂ ಜಿಡಿಪಿ ವಿಪರೀತ ಇಳಿಕೆ ಕಾಣುವುದು ಮತ್ತು ಬಡತನದ ಪ್ರಮಾಣ ಹೆಚ್ಚಳವಾಗಿರುವ ಈ ಸಮಯದಲ್ಲಿ ಈ ಹೋಲಿಕೆ ಸರಿಯಾದ ವಿಧಾನವಲ್ಲ. ಯಾಕೆಂದರೆ, ಅಂದಾಜಿಸಿದ್ದಕ್ಕಿಂತ ಸಾಲದ ಹೊರೆ ಹೆಚ್ಚಿನ ಜನರ ಮೇಲೆ ಬೀಳುತ್ತಿದೆ. 2023 ರ ವೇಳೆಗೆ ಸಾಲ-ಜಿಡಿಪಿ ಅನುಪಾತವು ಶೇ. 60 ಕ್ಕೆ ಇಳಿಯುತ್ತದೆ ಎಂಬುದು ಕನಸಿನ ಮಾತಾಗಿದೆ. ಈ ಪರಿಸ್ಥಿತಿ ಕನಿಷ್ಠ 2033 ರ ವರೆಗೆ ಯಾವುದೇ ಸುಧಾರಣೆ ಕಾಣುವುದಿಲ್ಲ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಲ ಪಡೆಯುವ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವನ್ನು ನಾವು ಗಮನಿಸಬಹುದು. ಕೇಂದ್ರ ಸರ್ಕಾರದ ಬಳಿ ಭಾರಿ ಸಂಪತ್ತು ಇದೆ ಮತ್ತು ತೆರಿಗೆಯ ಅನುಕೂಲವನ್ನೂ ಹೊಂದಿದೆ. ಆದರೆ ರಾಜ್ಯ ಸರ್ಕಾರಗಳು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಕೆಲವೇ ಅವಕಾಶಗಳನ್ನು ಹೊಂದಿವೆ. ಹೀಗಾಗಿ, ಬಂಡವಾಳ ಹಿಂಪಡೆತವು ಕೇಂದ್ರಕ್ಕೆ ಅನುಕೂಲ ಮಾಡಿಕೊಡಬಹುದು. ಆದರೆ, 1991 ರಿಂದಲೂ ರಾಜ್ಯಗಳು ಸ್ವತ್ತು ನಿರ್ಮಾಣದಲ್ಲಿ ಹೂಡಿಕೆ ಮಾಡದೇ, ಕೇವಲ ನಿರ್ವಹಣೆಯಲ್ಲಿ ತೊಡಗಿದ್ದರಿಂದ ಇವುಗಳಿಗೆ ಸಂಪನ್ಮೂಲದ ಕೊರತೆ ಉಂಟಾಗಿದೆ.

ಸಾಲದ ಆಯ್ದ ಅಂಕಿಅಂಶಗಳು (ಕೋಟಿ ರೂ.ಗಳಲ್ಲಿ)

ಒಟ್ಟು ಬಾಕಿ ಬಾಧ್ಯತೆ 1 ಸಾಲ ಪಕ್ವತೆ: 2020 ರಿಂದ 2025 2 ಪ್ರಕಟಿತ, ಪಡೆದ ಎಸ್‌ಡಿಎಲ್‌ 01.04.2020 ರಿಂದ 21.07.203 ಆರ್‌ಬಿಐ ಸೌಲಭ್ಯಗಳನ್ನು ಒದಗಿಸಿದ ತಿಂಗಳುಗಳ ಸಂಖ್ಯೆ 4 2019-20 5 ರಲ್ಲಿ ಆರ್‌ಬಿಐ ಓವರ್‌ಡ್ರಾಫ್ಟ್ ಅನ್ನು ಪಡೆದ ತಿಂಗಳುಗಳ ಸಂಖ್ಯೆ
ಕೇಂದ್ರ 94.62 11,27,958.36 ಅನ್ವಯಿಸುವುದಿಲ್ಲ ಅನ್ವಯಿಸುವುದಿಲ್ಲ ಅನ್ವಯಿಸುವುದಿಲ್ಲ
ಆಂಧ್ರ 3.41 92,611.6 16,000 11 7
ತೆಲಂಗಾಣ 1.68 10,876.9 12,500 12 2
ಮಹಾರಾಷ್ಟ್ರ 5.02 1,18,468.7 27,000 2 0
ಉ.ಪ್ರ 6.02 84,406.0 5,500 0 0
ಪ.ಬಂ 4.37 95,090.6 11,500 8 1
ತಮಿಳುನಾಡು 4.04 96,871.6 26,000 0 0
ಪಂಜಾಬ್‌ 2.29 54,111.7 4,200 12 7
ಗುಜರಾತ್‌ 3.25 73,172.6 7,500 0 0
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ 52.58 1,050,843.5 1,80,055 ಅನ್ವಯಿಸುವುದಿಲ್ಲ ಅನ್ವಯಿಸುವುದಿಲ್ಲ

ಪರಿಣಾಮ:

ಮೊದಲ ಪ್ರಮುಖ ಅಂಶ ಎಂದರೆ ರಾಜ್ಯಗಳಿಗೂ ಮತ್ತು ಕೇಂದ್ರ ಸರ್ಕಾರಕ್ಕೂ ವೆಚ್ಚ ಹೆಚ್ಚಳವಾಗುತ್ತಿದ್ದರೂ, ಆದಾಯ ಕಡಿಮೆಯಾಗುತ್ತಿದೆ. ಕೇಂದ್ರ ಸರ್ಕಾರವು ಪರಿಷ್ಕರಿಸಿದ ಬಜೆಟ್ ಅಂದಾಜಿನ ಶೇ. 90 ರಷ್ಟನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. 2020 ಮಾರ್ಚ್‌ನಲ್ಲಿ ಕೇವಲ ಶೇ. 65 ರಷ್ಟು ವೆಚ್ಚಗಳಿಗೆ ಹೋಲುವಷ್ಟು ಆದಾಯವನ್ನು ಸ್ವೀಕರಿಸಿದೆ. ಇನ್ನು ರಾಜ್ಯಗಳ ಪರಿಸ್ಥಿತಿ ಇನ್ನೂ ಸಂಕಷ್ಟದಲ್ಲಿದೆ. ಜಿಎಸ್‌ಟಿ ಸಂಗ್ರಹ ಕಳೆದ ವರ್ಷ 10.58 ಲಕ್ಷ ಕೋಟಿ ರೂ.ಗಳಾಗಿದ್ದು, ಗುರಿ 13.1 ಲಕ್ಷ ಕೋಟಿ ರೂ.ಗಳಾಗಿತ್ತು. ಈ ವರ್ಷ ಶೇ. 20 ರಷ್ಟು ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಎರಡನೆಯದಾಗಿ, ಆರ್ಥಿಕ ಕುಸಿತದ ಸಮಯದಲ್ಲಿ ಸರ್ಕಾರ ಹೆಚ್ಚು ಹೆಚ್ಚು ಸಾಲ ಪಡೆಯುತ್ತಿದೆ ಮತ್ತು ಕೋವಿಡ್‌ನಿಂದಾಗಿ ಖಾಸಗಿ ವಲಯವು ಬಂಡವಾಳ ಹೂಡಿಕೆಯನ್ನು ಕಡಿಮೆ ಮಾಡುತ್ತಿದೆ. ಆದರೆ, ಖಾಸಗಿ ವಲಯವೇ ಆರ್ಥಿಕತೆಯ ಜೀವನಾಡಿಯಾಗಿದೆ. ಕೋವಿಡ್‌ಗೂ ಮುನ್ನ ಖಾಸಗಿ ಹೂಡಿಕೆಯು ತಳಮಟ್ಟವನ್ನು ತಲುಪಿತ್ತು ಮತ್ತು ಪ್ರಸ್ತುತ ವರ್ಷ ಇದು ಇನ್ನೂ 4 ಲಕ್ಷ ಕೋಟಿ ರೂ. ಇಳಿಕೆ ಕಾಣುವ ಸಾಧ್ಯತೆಯಿದೆ. ನಾಗರಿಕರು ಮತ್ತು ಉದ್ಯಮವಲಯವು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಿರುವ ಕಾರಣ ಈ ಸನ್ನಿವೇಶ ಉಂಟಾಗಿದೆ. ಜನರು ಹಣವನ್ನು ಚಲಾವಣೆಯಿಂದ ಹಿಂಪಡೆದು ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡುತ್ತಿದ್ದಾರೆ. ಯಾಕೆಂದರೆ, ಜನರ ಬಳಿ ಇರುವ ಹಣದ ಬಗ್ಗೆ ಸರ್ಕಾರಗಳು ಗ್ಯಾರಂಟಿ ನೀಡುತ್ತಿಲ್ಲ. ಇನ್ನೊಂದೆಡೆ ಬ್ಯಾಂಕ್‌ಗಳು ಖಾಸಗಿ ವಲಯಕ್ಕೆ ಸಾಲ ನೀಡುತ್ತಿಲ್ಲ. ಬದಲಿಗೆ ಸರ್ಕಾರಕ್ಕೆ ಸಾಲ ನೀಡುವುದು ಹೆಚ್ಚು ಉತ್ತಮ ಎಂದು ಬ್ಯಾಂಕ್‌ಗಳು ಭಾವಿಸುತ್ತಿವೆ. ಇನ್ನೊಂದೆಡೆ, ಸರ್ಕಾರಕ್ಕೂ ಹಣ ಬೇಕಿರುವುದರಿಂದ, ಖಾಸಗಿ ವಲಯಕ್ಕೆ ನೀಡುತ್ತಿದ್ದ ಬಡ್ಡಿ ದರದಲ್ಲಿ ಬ್ಯಾಂಕ್‌ಗಳು ಸಾಲ ನೀಡುತ್ತಿವೆ. ಇದರಿಂದಾಗಿ ಸಾಲ ಮಾರುಕಟ್ಟೆಯಿಂದ ಬ್ಯಾಂಕ್‌ಗಳು ಹಿಂದೆ ಸರಿದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ರಾಜ್ಯಗಳು ಹಣವನ್ನು ನ್ಯಾಯಯುತವಾದ ವಿಧಾನದಲ್ಲಿ ಹೂಡಿಕೆ ಮಾಡುತ್ತಿಲ್ಲ. ಇದರಿಂದಾಗಿ ಅವರು ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ ಅಥವಾ ದಿವಾಳಿಯಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ನೆರವು ನೀಡುವ ಪರಿಸ್ಥಿತಿ ಉಂಟಾಗುತ್ತದೆ.

ಸಾಮಾನ್ಯವಾಗಿ, ಉಪಯುಕ್ತವಾದ ಆರ್ಥಿಕ ಚಟುವಟಿಕೆಯಲ್ಲಿ ಸಾಲವನ್ನು ಸರ್ಕಾರ ಹೂಡಿಕೆ ಮಾಡಿದರೆ, ಇದರಿಂದ ಉದ್ಯೋಗ ಸೃಷ್ಟಿಗೆ ಸಹಾಯವಾಗುತ್ತದೆ ಮತ್ತು ಭವಿಷ್ಯದಲ್ಲಿ ಸಾಲ ಮರುಪಾವತಿ ಮಾಡಲು ಅನುಕೂಲವಾಗುತ್ತದೆ. ಸಾಲ ಪಡೆದ ಹಣವನ್ನು ಸರ್ಕಾರಗಳು ಬಟವಾಡೆ ಮಾಡುತ್ತಿರುವುದರಿಂದ, ದೀರ್ಘ ಕಾಲದವರೆಗೆ ದೇಶದ ಆರ್ಥಿಕತೆ ನಿಂತ ನೀರಾಗುತ್ತದೆ ಮತ್ತು ವಿಪರೀತ ಸನ್ನಿವೇಶದಲ್ಲಿ ಇಡೀ ಆರ್ಥಿಕತೆ ಕುಸಿಯುವ ಮಟ್ಟಕ್ಕೆ ತಲುಪುತ್ತದೆ.

ನಾಲ್ಕನೆಯದಾಗಿ, ನಮ್ಮ ಸಂವಿಧಾನದಲ್ಲಿ 293ನೇ ಕಲಂ ಪ್ರಕಾರ, ರಾಜ್ಯಗಳು ಕೇವಲ ಕೇಂದ್ರ ಸರ್ಕಾರದ ಅನುಮತಿ ಮತ್ತು ಅನುಮೋದನೆಯೊಂದಿಗೆ ಸಾಲ ಪಡೆಯಬಹುದು. ಅಂದರೆ, ರಾಜ್ಯಗಳ ಸಾಲಕ್ಕೆ ಕೇಂದ್ರ ಸರ್ಕಾರವು ಪರೋಕ್ಷವಾಗಿ ಹೊಣೆಗಾರನಾಗಿರುತ್ತದೆ. ರಾಜ್ಯ ಸರ್ಕಾರವು ಸಂಪೂರ್ಣ ದಿವಾಳಿಯಾಗುವ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರದ ಸಾಲವನ್ನು ಮರುಪಾವತಿ ಮಾಡಿ ರಿಸ್ಕ್‌ನಿಂದ ಉಳಿಸಬೇಕಾಗುತ್ತದೆ. ಭಾರತದ ಬಹುತೇಕ ಸಾಲವು ಆಂತರಿಕವಾಗಿದ್ದು, ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿದವರು, ವಿಮೆ ಪಾಲಿಸಿಗಳನ್ನು ಖರೀದಿಸಿದವರು ಮತ್ತು ಇಪಿಎಫ್‌ ಹಾಗೂ ಮ್ಯೂಚುವಲ್ ಫಂಡ್‌ಗಳನ್ನು ಪಡೆದವರು ಸಂಕಷ್ಟಕ್ಕೀಡಾಗುತ್ತಾರೆ. ತೆರಿಗೆಯನ್ನು ವಿಪರೀತ ಪ್ರಮಾಣದಲ್ಲಿ ಹೆಚ್ಚಳ ಮಾಡಿದರೆ ಮಾತ್ರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಲವನ್ನು ಮರುಪಾವತಿ ಮಾಡಬಹುದು. ಹೆಚ್ಚು ತೆರಿಗೆ ವಿಧಿಸಿದರ ಬಳಕೆಗೆ ಕಡಿಮೆ ಹಣ ಲಭ್ಯವಿರುತ್ತದೆ ಮತ್ತು ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ. ಅಂದರೆ, ಉದ್ಯೋಗ ಕಡಿಮೆಯಾಗುತ್ತದೆ. ಮುಂದಿನ 5 ವರ್ಷಗಳಲ್ಲಿ, ದೇಶದ ಎಲ್ಲ ಸ್ತರದ ಜನರೂ ಪರೋಕ್ಷ ಮತ್ತು ನೇರ ತೆರಿಗೆಯನ್ನು ಹೆಚ್ಚು ಹೆಚ್ಚು ಪಾವತಿ ಮಾಡುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ. ಪೆಟ್ರೋಲಿಯಂ ಉತ್ಪನ್ನದ ವಿಚಾರದಲ್ಲಿ ಆಗುತ್ತಿರುವುದೂ ಇದೇ. ತೆರಿಗೆಗಳು ಶ್ರೀಮಂತರಿಗಿಂತ ಹೆಚ್ಚಾಗಿ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚು ಬಾಧಿಸುತ್ತದೆ.

ಪರಿಹಾರ:

ಈ ಸಾಲದ ವಿಷಚಕ್ರದಲ್ಲಿ ಸಿಲುಕುವ ಸನ್ನಿವೇಶದಲ್ಲಿ ಸಮತೋಲನ ಸಾಧಿಸಲು ಕೇಂದ್ರ ಸರ್ಕಾರಕ್ಕೆ ಎರಡೇ ವಿಧಾನಗಳಿವೆ. ಮತ ಬ್ಯಾಂಕ್ ರಾಜಕೀಯಕ್ಕಾಗಿ ರಾಜ್ಯಗಳು ಇನ್ನು ಸಾಲ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯಗಳು ಸ್ಪಷ್ಟವಾಗಿ ತಿಳಿಸಬೇಕು ಮತ್ತು ಪ್ರತಿ ವರ್ಷ ಒಟ್ಟು ಬಜೆಟ್‌ನಲ್ಲಿ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು (ಅಂದಾಜು ಶೇ. 33) ಬಂಡವಾಳ ನಿರ್ಮಾಣಕ್ಕೆ ವೆಚ್ಚ ಮಾಡಬೇಕು ಎಂದು ಸೂಚಿಸಬೇಕು. ಇದರ ಜೊತೆಗೆ, ರಾಜ್ಯಗಳ ಒಟ್ಟು ಆದಾಯದಲ್ಲಿ ಗರಿಷ್ಠ ಶೇ. 33 ರಷ್ಟನ್ನು ಮಾತ್ರ ಮತ ಬ್ಯಾಂಕ್ ರಾಜಕೀಯಕ್ಕೆ ವಿತರಿಸುವುದನ್ನು ಮಿತಿಗೊಳಿಸುವಂತೆ ರಾಜ್ಯಗಳಿಗೆ ಕಟ್ಟಾಜ್ಞೆ ಮಾಡಬೇಕು. ಈ ಕ್ರಮಗಳು ಕನಿಷ್ಠ ರಾಜ್ಯಗಳನ್ನು ಹಣಕಾಸಿನ ವಿಚಾರದಲ್ಲಿ ಶಿಸ್ತಿನ ಕಡೆಗೆ ಸಾಗಿಸುತ್ತದೆ.

-ಡಾ. ಎಸ್‌ ಅನಂತ್‌

ABOUT THE AUTHOR

...view details