ಪ್ರತಿಯೊಂದರಲ್ಲಿಯೂ ಸಾಧನೆ ತೋರುವತ್ತ ದಾಪುಗಾಲು ಇಡುವ ಮಾನವ ಒಮ್ಮೊಮ್ಮೆ ಎಡವಿ ಬೀಳುವ ಸಂದರ್ಭ ಬರುತ್ತದೆ. ಕೇವಲ ಸಂಪತ್ತು ಇದ್ದರೆ ಸಾಲದು, ಅದರ ಜೊತೆಯಲ್ಲಿಯೇ ಆರೋಗ್ಯವೂ ಇದ್ದರೆ ಅದಕ್ಕಿಂತ ಬೇರೆ ಭಾಗ್ಯವಿಲ್ಲ. ಆದ್ದರಿಂದಲೇ ಹಿರಿಯರು ಹೇಳುವುದು ಆರೋಗ್ಯವೇ ಭಾಗ್ಯ ಎಂದು.
ಆರೋಗ್ಯ ಸ್ವಾಸ್ಯ್ಥತೆ ಈ ಕ್ಷಣದ ಆದ್ಯತೆಯಾಗಿದೆ. ಇಂದಿನ ದಿನಗಳಲ್ಲಿ ವೈಯಕ್ತಿಕ ಹಂತದಿಂದ ಸಾರ್ವಜನಿಕ ಹಂತಕ್ಕೆ ತಲುಪಿದ್ದು ಆರೋಗ್ಯ. ಈ ಕ್ಷಣದ ಅಗತ್ಯಗಳಲ್ಲಿ ಪ್ರಮುಖವಾದುದು. ಇಂದಿನ ವೈಜ್ಞಾನಿಕ ಯುಗದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಮಜಲುಗಳನ್ನು ದಾಟಿದ್ದರೂ ನಿತ್ಯ ಎದುರಿಸುವ ಸವಾಲುಗಳು ಸುಲಭವಾಗಿ ಪರಿಹಾರವಾಗುವಂತದ್ದೂ ಅಲ್ಲ. ಇಂದು ಎದುರಿಸುತ್ತಿರುವ ಕೋವಿಡ್‌ನ ಜಾಗತಿಕ ಸಮಸ್ಯೆ ಜ್ವಲಂತ ನಿದರ್ಶನ.
ಅಭಿವೃದ್ದಿಹೊಂದಿದ ಹಾಗೂ ಅಭಿವೃದ್ದಿ ಹೊಂದುತ್ತಿರುವ ದೇಶಗಳ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆ. ಇದು ಹಲವಾರು ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಪ್ರತೀವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಗುರುತಿಸಿದ್ದು, ಈ ವರ್ಷ “ವಾಸ್ತವಿಕ ನೆಲೆಯಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಕಾಳಜಿ”ಎಂಬ ಅಂಶವನ್ನು ಪರಿಗಣಿಸಿ ಆಚರಿಸಲು ನಿರ್ಧರಿಸಿದೆ. ಮಾನಸಿಕ ಆರೋಗ್ಯವನ್ನು ಒಂದು ದಿನದಲ್ಲಿ ಗಳಿಸುವಂಥದ್ದಲ್ಲ, ಹಂತಹಂತವಾಗಿ ನಮ್ಮಲ್ಲಿ ನಡೆಯುವ ಆಂತರಿಕ ಪ್ರಕ್ರಿಯೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರದ ಅಧಿಕಾರಿಗಳು, ನಾಗರೀಕ ಸಮಾಜ ಸೇವಾ ಸಂಸ್ಥೆಗಳಿಗೆ ಸಾರ್ವಜನಿಕರಲ್ಲಿ ಮಾನಸಿಕ ಸ್ವಾಸ್ತ್ಯವನ್ನು ಹೊಂದುವಲ್ಲಿ ಅನುಸರಿಸಿದ ವಿಧಾನಗಳನ್ನು ವಿವರಿಸಲು ಅವಕಾಶ ನೀಡಿದೆ.
ಮಾನಸಿಕ ಆರೋಗ್ಯ
ಪ್ರತಿಯೊಬ್ಬ ವ್ಯಕ್ತಿಗೂ ಕ್ರಿಯೆಗೆ ಪ್ರತಿಕ್ರಿಯೆ ನೀಡುವಲ್ಲಿ ಆತನ ದೈಹಿಕ ಆರೋಗ್ಯದಷ್ಟೇ ಮುಖ್ಯ ಆತನ ಮಾನಸಿಕ ಆರೋಗ್ಯವು. ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸುವಂತೆ ಮಾನಸಿಕ ಆರೋಗ್ಯ ಎಂಬುದು ವ್ಯಕ್ತಿಯು ತನ್ನ ನಿತ್ಯ ಜೀವನದ ಒತ್ತಡಗಳನ್ನು ನಿಭಾಯಿಸುವಲ್ಲಿ ತನ್ನ ಸಾಮರ್ಥ್ಯದ ಅರಿವು ಹಾಗೂ ಸಾಮಾಜಿಕ ಜೀವನದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಸಮಾಜದ ಅಭಿವೃದ್ದಿಗೆ ಪೂರಕವಾದ ಕೊಡುಗೆ ನೀಡುವುದು.
ಸಾಮಾಜಿಕ ಸ್ವಾಸ್ಥ್ಯ ಮತ್ತು ಕೋವಿಡ್ ಪ್ರಭಾವ
ಜಾಗತಿಕ ಸಮಸ್ಯೆಯಾದ ಕೋವಿಡ್ ಇಂದು ಪ್ರತಿಯೊಬ್ಬರ ಮಾನಸಿಕ ಸ್ವಾಸ್ಥ್ಯವನ್ನು ಹದಗೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರ ನೇರ ಪ್ರಭಾವ ಕಂಡುಬಂದಿದ್ದು ಆರೋಗ್ಯ ಕಾರ್ಯಕರ್ತರು, ಮುಖ್ಯವಾಹಿನಿಯಲ್ಲಿ ಶ್ರಮಿಸುವ ಮುಂಚೂಣಿ ಸೇವಾಕಾರ್ಯಕರ್ತರು, ವಿದ್ಯಾರ್ಥಿಗಳು, ವಯೋವೃದ್ದರು ಹಾಗೂ ಒಂಟಿಯಾಗಿ ವಾಸಿಸುವವರಷ್ಟೇ ಮುಖ್ಯವಾದವರು ಹಾಗು ಈ ಮೊದಲೇ ಮಾನಸಿಕ ಆರೋಗ್ಯ ಸಂಬಂಧಿ ಖಾಯಿಲೆಗಳಿಂದ ಬಳಲುವವರ ಮೇಲೆ. ಕೋವಿಡ್ ತೀವ್ರತೆ ಹೆಚ್ಚಾದಂತೆ, ನರಸಂಬಂಧಿ, ಮಾನಸಿಕ ಅಸ್ವಸ್ಥತೆ ಹಾಗೂ ಇದಕ್ಕೆ ಸಂಬಂಧಿಸಿದ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಸೇವೆಯು ಕೆಲವೊಮ್ಮೆ ನಿರೀಕ್ಷಿತ ಮಟ್ಟದಲ್ಲಿ ಸಫಲತೆ ಸಾದಿಸುವಲ್ಲಿ ವಿಫಲತೆ ಹೊಂದಿತ್ತು.
ಮಾನಸಿಕ ಆರೋಗ್ಯ ಪ್ರತಿಯೊಬ್ಬರ ಆದ್ಯತೆ, ಎಲ್ಲರೂ ಬದುಕಿನಲ್ಲಿ ಒಂದಲ್ಲಾ ಒಂದು ಹಂತದಲ್ಲಿ ಭಯ, ಒತ್ತಡ, ಉದ್ವಿಗ್ನತೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಇಂತಹ ಸಣ್ಣಪುಟ್ಟ ಘಟನೆಗಳು, ಒತ್ತಡಗಳು ಮಾನಸಿಕವಾಗಿ ಜರ್ಜರಿಯುವಂತೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ
• ತಮ್ಮ ಸಾಮರ್ಥ್ಯದ ಬಗ್ಗೆ ದೃಢತೆ ಹೊಂದಬೇಕು.
• ಸಂದರ್ಭಕ್ಕೆ ಸರಿಯಾದ ರೀತಿಯಲ್ಲಿ ಸಮಚಿತ್ತ ಭಾವದಿಂದ ಪ್ರತಿಕ್ರಿಯಿಸುವುದು.
• ತಮ್ಮ ಕುಟುಂಬ, ಸ್ನೇಹಿತರು, ಕೆಲಸ ನಿರ್ವಹಣಾ ಸ್ಥಳದಲ್ಲಿ ಬೌತಿಕ ಹಾಗೂ ಮಾನಸಿಕವಾಗಿ ತಮ್ಮ ಅಸ್ತಿತ್ವವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಹಾಗೂ ಪ್ರತಿಯೊಬ್ಬರೊಂದಿಗೆ ಪೂರ್ಣ ಪ್ರಮಾಣದ ಪ್ರಾಮಾಣಿಕ ಸ್ಪಂದನೆ ಮಾಡುವುದು ಅಗತ್ಯ.
- ಮಾನಸಿಕ ಸ್ವಾಸ್ಥ್ಯದ ಅಂಕಿಅಂಶಗಳ ಪ್ರಕಾರ, ಸುಮಾರ 1 ಬಿಲಿಯನ್ ಮಂದಿ ಒಂದೆಲ್ಲಾ ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.
- ಮಾನಸಿಕ ಖಿನ್ನತೆ ವಿಶ್ವದಾದ್ಯಂತ ಸಮಸ್ಯೆಗಳಲ್ಲಿ ಒಂದಾಗಿದ್ದು, ರೋಗಗಳ ಒಟ್ಟಾರೆ ಸಮಸ್ಯೆಗೆ ಕಾರಣವಾಗಿದ್ದು, ಜಾಗತಿಕವಾಗಿ ವಯಸ್ಕರಲ್ಲಿ ಶೇ 5 ರಷ್ಟು ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
- ಜಾಗತಿಕವಾಗಿ 10-19 ರ ವಯೋಮಾನದ 7 ಜನರಲ್ಲಿ ಒಬ್ಬರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು,ಅರ್ದದಷ್ಟು ಮಂದಿಗೆ 14 ವರ್ಷದಲ್ಲಿ ಮಾನಸಿಕ ಸಮಸ್ಯೆ ಕಂಡು ಬಂದರೂ ಗಣನೆಗೆ ಬಾರದೇ ಚಿಕಿತ್ಸೆ ದೊರೆಯದೇ ಇರುವವರು.
- ಸ್ಕಿಜೋಪ್ರೇನಿಯಾದಂತಹ ತೀವ್ರತರವಾದ ಮಾನಸಿಕ ರೋಗಗಳಿಂದ ಬಳಲುವ ರೋಗಿಗಳು ಸಾಮಾನ್ಯ ಜನರಿಗಿಂತ 10-20 ವರ್ಷ ಮೊದಲು ಮರಣಹೊಂದುತ್ತಾರೆ.
- ಶೇ 100ರಲ್ಲಿ ಒಬ್ಬರು ಆತ್ಮಹತ್ಯೆಯಿಂದ ಮರಣ ಹೊಂದುವುದು ಅಲ್ಲದೆ 15-29 ರ ವಯೋಮಾನದವರ ಸಾವಿನ ಪ್ರಮಾಣ ಹೆಚ್ಚಿಸುವಲ್ಲಿ ನಾಲ್ಕನೇ ಪ್ರಮುಖ ಕಾರಣವಾಗಿ ಆತ್ಮಹತ್ಯೆಯು ಪರಿಗಣಿಸಲ್ಪಟ್ಟಿದೆ.
ಜಾಗತಿಕವಾಗಿ ಮಾನಸಿಕ ಆರೋಗ್ಯದ ಕಾಳಜಿ:
- ಮಾನಸಿಕ ಸಮಸ್ಯೆ ಸಾರ್ವತ್ರಿಕವಾಗಿದ್ದರೂ,ಮಾನಸಿಕ ಆರೋಗ್ಯ ಸೇವೆಗಳು ಮತ್ತು ಪೂರೈಕೆಯ ನಡುವಿನ ಅಂತರವು ಕಡಿಮೆಯಾಗಿಲ್ಲ.
- ಕೆಲವೇ ಕೆಲವು ಮಂದಿಗೆ ಮಾತ್ರ ಉತ್ತಮ ಗುಣಮಟ್ಟದ ಮಾನಸಿಕ ಆರೋಗ್ಯದ ಸೇವೆ ದೊರೆಯುವುದು
- ಹಲವಾರು ವರ್ಷಗಳಿಂದ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ,ಇದನ್ನು ತಡೆಗಟ್ಟುವಲ್ಲಿ ಹಾಗೂ ಅರೈಕೆ ಮಾಡುವಲ್ಲಿ ಹೂಡಿಕೆ ಮಾಡದೇ ಇರುವುದರ ಪರಿಣಾಮವಾಗಿ ಮಾನಸಿಕ ಆರೋಗ್ಯ ರಕ್ಷಣೆಯ ಅಂತರವು ಕಡಿಮೆಯಾಗದೇ ಇರುವುದಕ್ಕೆ ಕಾರಣವಾಗಿದೆ.
- ಸಮಾಜದಲ್ಲಿ ಮಾನಸಿಕವಾಗಿ ಅನಾರೋಗ್ಯದಿಂದ ಕೂಡಿರುವವರ ಬಗ್ಗೆ ಕಳಂಕ ,ತಾರತಮ್ಯ ಭಾವನೆಯು ವ್ಯಾಪಕವಾಗಿ ಹರಡಿರುವುದನ್ನು ಗಮನಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದನ್ನು ತಿಳಿಸುತ್ತದೆ
ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯ ಹರಡುವಿಕೆ
- ಮಾನಸಿಕ ಅಸ್ವಸ್ಥತೆಯ ಪ್ರಮಾಣ ನಗರದ ಮೆಟ್ರೋ ವಾಸಿಗಳಲ್ಲಿ ಅಧಿಕವಾಗಿದೆ.
- ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳಲ್ಲಿ ಒಂದು ಅಥವಾ ಹೆಚ್ಚಿನ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರನ್ನು ಗುರುತಿಸಲಾಗಿದೆ.
- ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಸಾಮಾಜಿಕ. ಕೌಟುಂಬಿಕ ಹಾಗೂ ಕಾರ್ಯಕ್ಷೇತ್ರದಲ್ಲಿ ವೈಫಲ್ಯವನ್ನು ಹೊಂದಿದ್ದಾರೆ.
ಭಾರತದಲ್ಲಿ ಚಿಕಿತ್ಸೆಯ ಅಂತರ, ಭಾರತದಲ್ಲಿ 150 ಮಿಲಿಯನ್ ಜನರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.