ಈಗ ಪ್ರತಿಯೊಬ್ಬರೂ ತಮಗೆ ಗೊತ್ತಿರದ ಸ್ಥಳಕ್ಕೆ ತೆರಳುವಾಗ ಮಾರ್ಗ ತಿಳಿದುಕೊಳ್ಳಲು ಗೂಗಲ್ ನಕ್ಷೆ(Google Map) ಬಳಸುತ್ತಾರೆ. ಅದರ ಸಹಾಯದಿಂದ ಸುಲಭವಾಗಿ ತಾವಂದುಕೊಂಡ ಜಾಗಕ್ಕೆ ತಲುಪಬಹುದು. ಈ ಮ್ಯಾಪ್ ನಮಗೆ ಬೇಕಾದ ಮಾರ್ಗವನ್ನು ತ್ವರಿತವಾಗಿ ತೋರಿಸುತ್ತದೆ. ಕೇವಲ ಮಾರ್ಗವಷ್ಟೇ ಅಲ್ಲದೆ ಇತರ ಉದ್ದೇಶಗಳಿಗೂ ಕೂಡ ನಕ್ಷೆ ಬಳಸಬಹುದಾಗಿದೆ. ಗೂಗಲ್ ನಕ್ಷೆಯಿಂದ ನಿಮಗೆ ಈ ರೀತಿಯ ವಿಭಿನ್ನ ಪ್ರಯೋಜನಗಳೂ ಇವೆ.
ಕಾರು ಪಾರ್ಕಿಂಗ್ ಸ್ಥಳ ತಿಳಿಯುವುದು ಸುಲಭ:ನೀವು ಯಾವುದೋ ಜಾತ್ರೆಗೆ ತೆರಳಿದ್ದಾಗ, ಇಲ್ಲವೇ ಜನಸಂದಣಿಯಿಂದ ಗಿಜಿಗುಡುವ ಸ್ಥಳದಲ್ಲಿದ್ದಾಗ ನಿಮಗೆ ಕಾರು ಪಾರ್ಕಿಂಗ್ ಮಾಡಿದ್ದ ಜಾಗ ಹುಡುಕುವುದು ಕಷ್ಟ. ಆಗ ನೀವು ಇರುವ ಸ್ಥಳ, ದಿಕ್ಕನ್ನೂ ಕೂಡ ಅಂದಾಜಿಸಲಾಗದೆ ಹುಡುಕಾಡಿ ಅನಾವಶ್ಯಕವಾಗಿ ನಿಮ್ಮ ಸಮಯ ವ್ಯರ್ಥವಾಗುತ್ತೆ. ಇಂತಹ ಸಂದರ್ಭದಲ್ಲಿ ನಿಮಗೆ ಗೂಗಲ್ ಮ್ಯಾಪ್ ದಾರಿದೀಪವಾಗುತ್ತದೆ.
ನೀವು ಮಾಡಬೇಕಿರುವುದೇನು?:ಮೊದಲಿಗೆ ಕಾರು ಪಾರ್ಕಿಂಗ್ ಮಾಡುವಾಗಲೇ ನಿಮ್ಮ ಮೊಬೈಲ್ನಲ್ಲಿರೋ ಗೂಗಲ್ ನಕ್ಷೆ ಆ್ಯಪ್ನಲ್ಲಿ ಆ ಸ್ಥಳವನ್ನು ಸೇವ್ ಮಾಡಿಕೊಳ್ಳಬೇಕು. ಪಾರ್ಕಿಂಗ್ ಸ್ಥಳವನ್ನು ಸೇವ್ ಮಾಡುವುದು ಮೊದಲ ಹಂತವಾಗಿದೆ. ಹೀಗೆ ಮಾಡಲು ನಿಮ್ಮ ಕಾರನ್ನು ನಿಲ್ಲಿಸಿದ ನಂತರ, ನಿಮ್ಮ ಗೂಗಲ್ ನಕ್ಷೆಗಳ ಅಪ್ಲಿಕೇಶನ್ ಓಪನ್ ಮಾಡಿ ಮತ್ತು ನಿಮ್ಮ ಪ್ರಸ್ತುತ ಸ್ಥಳವನ್ನು ಪ್ರತಿನಿಧಿಸುವ ಬ್ಲೂ ಪಿನ್ (Blue Pin) ಮೇಲೆ ಟ್ಯಾಪ್ ಮಾಡಿ. ನಂತರ, ಮೂರು ಆಯ್ಕೆಗಳು ತೆರೆಯಲ್ಪಡುತ್ತವೆ. ಆಗ ಸೇವ್ ಯುವರ್ ಪಾರ್ಕಿಂಗ್ ಆಯ್ಕೆಯನ್ನು ತೆಗೆದುಕೊಳ್ಳಿ.. ಆಗ ನೀವು ಫೋಟೋ, ಪಾರ್ಕಿಂಗ್ ಸಂಖ್ಯೆ ಇತ್ಯಾದಿ ಹೆಚ್ಚಿನ ವಿವರಗಳನ್ನೂ ಸೇರಿಸಬಹುದಾಗಿದೆ. ಅಲ್ಲದೆ, Remember where I have parked ಎಂದು ಹೇಳುವ ಮೂಲಕ ನಿಮ್ಮ ಪಾರ್ಕಿಂಗ್ ಸ್ಥಳವನ್ನು ಸೇವ್ ಮಾಡಲು ಗೂಗಲ್ ಸಹಾಯ ಪಡೆಯಹುದಾಗಿದೆ.