ಲಖನೌ: ಮಂಗಳವಾರ ಉತ್ತರ ಪ್ರದೇಶದ ಲಖನೌದಲ್ಲಿನ ವಿಧಾನ ಭವನದ ಎದುರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪತಿಯ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಮನನೊಂದ ಮಹಿಳೆ ಅ. 13ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಧಾನ ಭವನದ ಬಳಿ ಇದ್ದ ಪೊಲೀಸರು ಬೆಂಕಿ ನಂದಿಸಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಶೇ. 90ರಷ್ಟು ಸುಟ್ಟು ಗಾಯಗಳಿಂದ ಬಳಲುತ್ತಿದ್ದ ಆಕೆ ಬುಧವಾರ ಸಂಜೆ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ:ಲಖನೌ ವಿಧಾನ ಭವನದ ಎದುರೇ ಬೆಂಕಿ ಹಚ್ಚಿಕೊಂಡ ಮಹಿಳೆ
ಘಟನೆ ಹಿನ್ನೆಲೆ:
ಮಹಾರಾಜ್ಗಂಜ್ ಮೂಲದ 35 ವರ್ಷದ ಈ ಮಹಿಳೆ ಮೊದಲು ಅಖಿಲೇಶ್ ತಿವಾರಿ ಎಂಬವರೊಂದಿಗೆ ವಿವಾಹವಾಗಿದ್ದು, ವಿಚ್ಛೇದನ ಪಡೆದಿದ್ದಳು. ಬಳಿಕ ಆಸಿಫ್ ಎಂಬವರೊಂದಿಗೆ ಮತ್ತೊಂದು ಮದುವೆಯಾಗಿ ಮತಾಂತರವಾಗಿದ್ದರು. ಕೆಲಸಕ್ಕೆಂದು ಆಸಿಫ್ ದುಬೈಗೆ ತೆರಳಿದ್ದು, ಈತನ ಕುಟುಂಬಸ್ಥರು ಮಹಿಳೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಈ ಸಂಬಂಧ ಮಹಾರಾಜ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ನೊಂದ ಮಹಿಳೆ ಈ ನಿರ್ಧಾರಕ್ಕೆ ಬಂದಿದ್ದರು ಎಂಬ ಆರೋಪ ಕೇಳಿ ಬಂದಿದೆ.