ಮಹೋಬಾ (ಉತ್ತರ ಪ್ರದೇಶ): ನಿನ್ನೆ ಕೊಳವೆ ಬಾವಿಯಲ್ಲಿ ಬಿದ್ದಿದ್ದ ನಾಲ್ಕು ವರ್ಷದ ಬಾಲಕನನ್ನು ರಕ್ಷಿಸಲು 20 ಗಂಟೆಗಳ ಕಾರ್ಯಾಚರಣೆ ನಡೆಸಲಾಗಿದ್ದರೂ ಬಾಲಕನನ್ನು ಉಳಿಸಿಕೊಳ್ಳಲಾಗಿಲ್ಲ.
ಫಲಿಸದ 20 ಗಂಟೆಗಳ ಕಾರ್ಯಾಚರಣೆ: ಬದುಕಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ - ಮಹೋಬಾ ಜಿಲ್ಲೆಯ ಬುಧೌರಾ ಗ್ರಾಮ
20 ಗಂಟೆಗಳ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನನ್ನು ಹೊರ ತರಲಾಗಿದ್ದು, ಬಾಲಕ ಮೃತಪಟ್ಟಿರುವುದಾಗಿ ಸ್ಥಳದಲ್ಲೇ ಇದ್ದ ವೈದ್ಯರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಬುಧೌರಾ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಘಟನೆ ನಡೆದಿತ್ತು. ಧನೇಂದ್ರ ಅಲಿಯಾಸ್ ಬಾಲು ಎಂಬ ಬಾಲಕ ತನ್ನ ಅಕ್ಕನೊಂದಿಗೆ ಆಟವಾಡುತ್ತಿರುವ ವೇಳೆ ಕೊಳವೆ ಬಾವಿಯೊಳಗೆ ಬಿದ್ದಿದ್ದನು. 30 ಅಡಿ ಆಳದಲ್ಲಿ ಸಿಲುಕಿದ್ದನು.
ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡದ ಜೊತೆ ಸೇರಿ ಅಗ್ನಿ ಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾಡಳಿತ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಪೈಪ್ ಮೂಲಕ ಬಾಲಕನಿಗೆ ಆಮ್ಲಜನಕ ಪೂರೈಕೆಯನ್ನೂ ಮಾಡಿದ್ದಾರೆ. 20 ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕನನ್ನು ಬಾವಿಯಿಂದ ಹೊರ ತರಲಾಗಿದ್ದು, ಬಾಲಕ ಮೃತಪಟ್ಟಿರುವುದಾಗಿ ಸ್ಥಳದಲ್ಲೇ ಇದ್ದ ವೈದ್ಯರು ತಿಳಿಸಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂತ್ಯೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.