ಹಾಸನ:ಎಟಿಎಂ ದುರ್ಬಳಕೆ ಮಾಡಿಕೊಂಡಿದ್ದಲ್ಲದೇ ಹಣ ದೋಚಿದ್ದ ಖದೀಮರಿಬ್ಬರನ್ನು ಬಂಧಿಸುವಲ್ಲಿ ಶ್ರವಣಬೆಳಗೊಳದ ಪೊಲೀಸರು ಯಶಸ್ವಿಯಾಗಿದ್ದಾರೆ.
ಚನ್ನರಾಯಪಟ್ಟಣ ತಾಲೂಕು ಗದ್ದೆ ಬಿಂಡೇನಹಳ್ಳಿ ಗ್ರಾಮದ ಹೇಮಂತ್ (24) ಮತ್ತು ಮಂಜುನಾಥ್ (24) ಬಂಧಿತ ಆರೋಪಿಗಳು. ಖದೀಮರಿಬ್ಬರು ಪಟ್ಟಣದ ಕಾರ್ಪೊರೇಷನ್ ಬ್ಯಾಂಕ್ ಮತ್ತು ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿನ ಎಟಿಎಂನಲ್ಲಿ ಬೇರೆಯವರ ಎಟಿಎಂ ಕಾರ್ಡ್ ಬಳಸಿ ಹಣ ಎಗರಿಸಿದ್ದರು.
ಜೂ.1 ರಂದು ಹೊಸಹಳ್ಳಿ ಗ್ರಾಮದ ಸುಕನ್ಯಾ ಎಂಬುವವರು ಶ್ರವಣಬೆಳಗೊಳದ ಕಾರ್ಪೊರೇಷನ್ ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಲು ಮುಂದಾಗಿದ್ದರು. ಹಣ ಡ್ರಾ ಮಾಡಲು ತಿಳಿಯದಿದ್ದಾಗ ಪಕ್ಕದಲ್ಲಿದ್ದ ಈ ಇಬ್ಬರು ಯುವಕರಿಗೆ ಡ್ರಾ ಮಾಡಿಕೊಡುವಂತೆ ಮನವಿ ಮಾಡಿದ್ದರು.
ಅವರಿಗೆ 20000 ಹಣವನ್ನ ಡ್ರಾ ಮಾಡಿಕೊಟ್ಟ ಖದೀಮರು ಬಳಿಕ ಅಸಲಿ ಎಟಿಎಂ ಕೊಡುವ ಬದಲು ನಕಲಿ ಎಟಿಎಂ ಕೊಟ್ಟು ವಂಚಿಸಿದ್ದಾರೆ. ಅಲ್ಲದೇ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿರುವ ಎಟಿಎಂನಲ್ಲಿ ಸುಕನ್ಯಾ ಖಾತೆಯಿಂದ ಅದೇ ಎಟಿಎಂ ಬಳಸಿ 20000 ಹಣವನ್ನು ದೋಚಿದ್ದಾರೆ.
ಹಣ ಪಡೆದ ಬಳಿಕ ಮರುದಿನ ಸುಕನ್ಯಾ ಬ್ಯಾಂಕಿಗೆ ಬಂದು ಪಾಸ್ಬುಕ್ ಪರಿಶೀಲನೆ ಮಾಡಿದಾಗ 20000 ಹಣ ದೋಚಿರುವುದು ಗೊತ್ತಾಗಿದೆ. ಸುಕನ್ಯಾ ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಇದರನ್ವಯ ಎಟಿಎಂನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಹಣ ದೋಚಿದ್ದ ಇಬ್ಬರನ್ನು ಶ್ರವಣಬೆಳಗೊಳ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಬ್ಬರನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.