ಕರ್ನಾಟಕ

karnataka

ETV Bharat / jagte-raho

ವಯಸ್ಸು ಕಿರಿದು ಈತನ ಅಪರಾಧ ಪಟ್ಟಿ ಹಿರಿದು! ಕಿಲಾಡಿಯ ಬಂಧಿಸಿದ ಕಲಬುರಗಿ ಪೊಲೀಸರು

ಐಷಾರಾಮಿ ಜೀವನ ನಡೆಸಲು ದರೋಡೆ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದ ಮೆಹಬೂಬ್ ನಗರದ ನಿವಾಸಿ ಮುಬೀನ್ ಅಲಿಯಾಸ್ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಬೀನ್ ಅಲಿಯಾಸ್ ಅಬ್ದುಲ್ ರೆಹಮಾನ್
ಮುಬೀನ್ ಅಲಿಯಾಸ್ ಅಬ್ದುಲ್ ರೆಹಮಾನ್

By

Published : Oct 7, 2020, 4:54 PM IST

ಕಲಬುರಗಿ:ಸಣ್ಣ ವಯಸ್ಸಿನಲ್ಲೇ ಕ್ರೈಂ ಲೋಕದಲ್ಲಿ ದೈತ್ಯವಾಗಿ ಬೆಳೆದು ನಿಂತಿದ್ದ ಖದೀಮನ ಕಾಲಿಗೆ ಫೈರಿಂಗ್ ಮಾಡಿ ಹೆಡೆಮುರಿ ಕಟ್ಟುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೆಹಬೂಬ್ ನಗರದ ನಿವಾಸಿ ಮುಬೀನ್ ಅಲಿಯಾಸ್ ಅಬ್ದುಲ್ ರೆಹಮಾನ್(22) ಎಂಬಾತ ಐಷಾರಾಮಿ ಜೀವನ ನಡೆಸಲು ದರೋಡೆ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದ. ವಯಸ್ಸು ಸಣ್ಣದಾದ್ರು ಈತನ ಹೆಸರಿನಲ್ಲಿರುವ ಅಪರಾಧ ಪ್ರಕರಣಗಳಿಗೇನು ಕಡಿಮೆಯಿರಲಿಲ್ಲ.

ಕಳೆದ ತಿಂಗಳು ಕಲಬುರಗಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯನ್ನು ತಡೆದು ದರೋಡೆ ಮಾಡಿದಲ್ಲದೆ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮೀಣ ಪೊಲೀಸರು ನಿನ್ನೆ ಮುಬೀನ್‌ನನ್ನು ಅರೆಸ್ಟ್​ ಮಾಡಿದ್ದರು. ಇಂದು ಬೆಳ್ಳಂಬೆಳಗ್ಗೆ ಬಚ್ಚಿಟ್ಟ ಮಾರಕಾಸ್ತ್ರಗಳ ಮಹಜರು ಮಾಡಲು ಕಲಬುರಗಿ ಹೊರವಲಯದ ತಾಜ್ ಸುಲ್ತಾನಪೂರ ಬಳಿ ಕರೆದೊಯ್ಯುವಾಗ ಪೊಲೀಸರ ಮೇಲೆ ಮಚ್ಚು ಬೀಸಲು ಯತ್ನಿಸಿದ್ದಾನೆ. ಆಗ ಗ್ರಾಮೀಣ ಠಾಣೆ ಇನ್ಸ್​ಪೆಕ್ಟರ್ ಸೋಮಲಿಂಗ್ ಮುಬೀನ್ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದ್ದಾರೆ.

ಸದ್ಯ ಮುಬೀನ್​ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಗಾಯಗೊಂಡ ಹವಾಲ್ದಾರ್ ಬೇಗ ಹಾಗೂ ಪೊಲೀಸ್ ಕಾನ್​ಸ್ಟೇಬಲ್ ಅಂಬಾಜಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಬೀನ್ ಅಲಿಯಾಸ್ ಅಬ್ದುಲ್ ರೆಹಮಾನ್ ಕಳೆದ ಕೆಲದಿನಗಳಿಂದ ಕ್ರೈಂ ಲೋಕದಲ್ಲಿ ಪುಲ್​ ಆ್ಯಕ್ಟಿವ್ ಆಗಿದ್ದ. ಮೂರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತ ತಲೆಮರೆಸಿಕೊಂಡಿದ್ದ. ನಿತ್ಯ ಗುಂಪು ಕಟ್ಟಿಕೊಂಡು ಫೀಲ್ಡಿಗೆ ಇಳಿಯುತ್ತಿದ್ದ ಈತನ ಕೃತ್ಯ ಪೊಲೀಸರಿಗೆ ತಲೆಬಿಸಿ ಮಾಡಿತ್ತು. ಅಮಾಯಕರ ಮೇಲೆ ಹಲ್ಲೆ ಮಾಡಿ ದರೋಡೆ ಮಾಡುತ್ತಿದ್ದ ಮುಬೀನ್ ಸಹಚರ 22 ವರ್ಷದ ಮಹಮ್ಮದ ಜಾಕೀರ್ ಮತ್ತು ಮಹಮ್ಮದ್ ಸಾಜಿದ್ ಖಾನ್ ಇಬ್ಬರನ್ನು ಹೆಡೆಮುರಿಕಟ್ಟಿ ಈಗಾಗಲೇ ಜೈಲಿಗಟ್ಟದ್ದಾರೆ.

ಇದೀಗ ಪೊಲೀಸರ ಗುಂಡೇಟು ತಿಂದು ಮುಬೀನ್ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾನೆ. ಗುಣಮುಖನಾದ ಬಳಿಕ ಈತನನ್ನು ಜೈಲಿಗೆ ಅಟ್ಟಲಿದ್ದಾರೆ‌. ಫೈರಿಂಗ್ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details