ಹುಬ್ಬಳ್ಳಿ:ತಣ್ಣಗಿದ್ದ ಹುಬ್ಬಳ್ಳಿಯಲ್ಲಿಂದು ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಪ್ರಾಂಶುಪಾಲರೊಬ್ಬರನ್ನು ಅವರ ಮನೆಯ ಬಾಗಿಲಿನಲ್ಲೇ ಹತ್ಯೆ ಮಾಡಲಾಗಿದೆ.
ತಾನು ಕರೆದಾಗ ಹೆಂಡತಿ ಬರಲಿಲ್ಲ ಎಂದು ಮಾವನನ್ನೇ ಹತ್ಯೆ ಮಾಡಿದ ವೈದ್ಯ ಅಳಿಯ... ಕೊಲೆಯಾಗಿರುವ ವ್ಯಕ್ತಿಯ ಹೆಸರು ಶಂಕರ್ ಮುಶಣ್ಣವರ್, ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಪ್ರಾಶುಂಪಾಲ. ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದ ಶಂಕರ್ ಹುಬ್ಬಳ್ಳಿಯ ಲಿಂಗರಾಜ್ ನಗರದಲ್ಲಿ ತನ್ನ ಮಡದಿ-ಮಕ್ಕಳೊಂದಿಗೆ ನಿವೃತ್ತಿ ಜೀವನ ಕಳೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಎಂದಿನಂತೆ ವಾಕಿಂಗ್ ಹೋಗಬೇಕು ಎನ್ನುವಷ್ಟರಲ್ಲಿ ಶಂಕರ್ ಮೇಲೆ ಅಟ್ಯಾಕ್ ಆಗಿದೆ. ಅಷ್ಟೇ ಅಲ್ಲದೆ ಅವರ ಪತ್ನಿ, ಮಗಳ ಮೇಲೆಯೂ ಚಾಕುವಿನಿಂದ ದಾಳಿ ಮಾಡಲಾಗಿದೆ.
ತೀವ್ರ ರಕ್ತಸ್ರಾವದಿಂದ ಶಂಕರ್ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಹಾಗೂ ಮಗಳು ಲತಾಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಳಿಯ ಸಂತೋಷನೇ ಶಂಕರ್ ಹಾಗೂ ಕುಟುಂಬದ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಕೂಡಲೇ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೊಲೆಗೆ ಕಾರಣ:
ಗಂಡ ಹೆಂಡತಿ ಜಗಳವೇ ಮಾವನನ್ನು ಕೊಲೆ ಮಾಡಲು ಕಾರಣ ಎಂದು ತಿಳಿದು ಬಂದಿದೆ. ಎಷ್ಟೋ ಬಾರಿ ಇಬ್ಬರ ಮಧ್ಯೆ ರಾಜಿ ಸಂಧಾನ ಮಾಡಿದರೂ ಬಗೆಹರಿಯದೇ ಕೊನೆಗೆ ಜೀವವೇ ಹೋಯಿತು. ಜೊತೆಗೆ ತಾಯಿ ಮತ್ತು ತಂಗಿ ಕೂಡಾ ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿದೆ ಎನ್ನುತ್ತಾರೆ ಇನ್ನೋರ್ವ ಪುತ್ರಿ.
ಆರೋಪಿ ಸಂತೋಷ್ ಹಾಗೂ ಪತ್ನಿ ಲತಾ ಇಬ್ಬರೂ ವೈದ್ಯರಾಗಿದ್ದು, ಕಳೆದ ಹಲವಾರು ದಿನಗಳಿಂದ ಮನಸ್ತಾಪ ಮಾಡಿಕೊಂಡು ಬೇರೆ ಬೇರೆಯಾಗಿ ವಾಸಿಸುತ್ತಿದ್ದರಂತೆ. ಇಬ್ಬರು ಮುದ್ದಾದ ಮಕ್ಕಳಿದ್ದರೂ ಈ ದಂಪತಿಯ ಜಗಳ ಮಾತ್ರ ಕಾಮನ್ ಆಗಿತ್ತಂತೆ. ಹೀಗಾಗಿಯೇ ಕಳೆದ ಕೆಲ ದಿನಗಳ ಹಿಂದೆ ಗಂಡನ ಮನೆ ತೊರೆದಿದ್ದ ಲತಾ, ಹುಬ್ಬಳ್ಳಿಯಲ್ಲಿದ್ದ ತಂದೆಯ ಮನೆಯಲ್ಲೇ ವಾಸ ಮಾಡುತ್ತಿದ್ದರು. ಹುಬ್ಬಳ್ಳಿಯ ಪ್ರತಿಷ್ಠಿತ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಲತಾ ಕೆಲಸ ಮಾಡುತ್ತಿದ್ದರೆ, ಪತಿ ಸಂತೋಷ್ ದಂತ ವೈದ್ಯ. ಪತ್ನಿಯನ್ನು ತನ್ನ ಬಳಿ ಕಳುಹಿಸಿಕೊಡುವಂತೆ ಸಂತೋಷ್ ಆಗಾಗ ಮಾವನ ಬಳಿ ಬಂದು ಜಗಳವಾಡುತ್ತಿದ್ದನಂತೆ. ಇಂದು ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಆಯುಕ್ತ ಲಾಬೂರಾಮ್ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.