ಚಾಮರಾಜನಗರ: ಕೊಟ್ಟವ ಕೋಡಂಗಿ ಇಸ್ಕೊಂಡವ ವೀರಭದ್ರ ಎಂಬ ಗಾದೆ ಮಾತಿನಂತೆ ವೃದ್ಧೆಯೊಬ್ಬರು ತನ್ನ ಆಭರಣವನ್ನು ಕಳೆದುಕೊಂಡಿರುವ ಘಟನೆ ಜಿಲ್ಲೆಯ ಯಳಂದೂರಿನಲ್ಲಿ ನಡೆದಿದೆ.
ಯಳಂದೂರು ತಾಲೂಕು ಗುಂಬಳ್ಳಿ ಗ್ರಾಮದ ಜಯಮ್ಮಣ್ಣಿ (70) ಮೋಸ ಹೋದ ವೃದ್ಧೆ. ಯಾಮಾರಿಸಿದ ಕಳ್ಳ ಆಕೆಯ ಬಳಿಯಿದ್ದ 4 ಚಿನ್ನದ ಬಳೆ, 35 ಗ್ರಾಂ ತೂಕದ ಸರವನ್ನು ಎಗರಿಸಿದ್ದಾನೆ. ಖತರ್ನಾಕ್ ಕಳ್ಳನ ನಾಟಕಕ್ಕೆ ವೃದ್ಧೆ ಲಕ್ಷಾಂತರ ರೂ. ಮೌಲ್ಯದ ಬಂಗಾರ ಕಳೆದುಕೊಂಡಿದ್ದಾರೆ.
ಚಿನ್ನ ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋದ ವೃದ್ಧೆ ಘಟನೆಯ ವಿವರ: ಜಯಮ್ಮಣಿ ಯಳಂದೂರಿನ ಎಂಡಿಸಿಸಿ ಬ್ಯಾಂಕ್ಗೆ ತೆರಳುತ್ತಿದ್ದಾಗ ಅಪರಿಚಿತ ಮಹಿಳೆಯೋರ್ವಳು ಅವರೊಂದಿಗೆ ಜೊತೆಯಾಗಿದ್ದಾಳೆ. ಜೋರಾಗಿ ಮಳೆ ಬರುತ್ತಿದ್ದರಿಂದ ಸ್ವಲ್ಪ ಹೊತ್ತು ನಿಂತು ಹೊರಡೋಣ ಬನ್ನಿ ಎಂದು ಆ ಮಹಿಳೆ ವೃದ್ಧೆಗೆ ಹೇಳುತ್ತಾಳೆ. ಹಾಗೆ ಇಬ್ಬರು ದಾರಿಬದಿ ಇದ್ದ ಮನೆ ಮುಂದೆ ಕುಳಿತಿದ್ದರು. ಈ ವೇಳೆ ವ್ಯಕ್ತಿವೊಬ್ಬ ಬಂದು ನನ್ನ ಪರ್ಸ್ ಕಳವಾಗಿದೆ, ನಿಮಗೇನಾದರು ಸಿಕ್ಕಿದೆಯಾ ಎಂದು ಕೇಳುತ್ತಾನೆ. ಆಗ ಇಬ್ಬರೂ ಸಿಕ್ಕಿಲ್ಲ ಎನ್ನುತ್ತಾರೆ.
ನಿಮ್ಮ ಮಾಂಗಲ್ಯ ಮುಟ್ಟಿ ಪ್ರಮಾಣ ಮಾಡಿ ಎಂದು ವೃದ್ಧೆಯೊಂದಿಗೆ ಬಂದಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿ ಹೇಳುತ್ತಾನೆ. ಆಕೆ ಮಾಂಗಲ್ಯ ಬಿಚ್ಚಿ ಪೇಪರ್ನಲ್ಲಿ ಸುತ್ತಿ ಪರ್ಸ್ ಸಿಕ್ಕಿಲ್ಲವೆಂದು ಪ್ರಮಾಣ ಮಾಡುತ್ತಾಳೆ. ಬಳಿಕ, ವೃದ್ಧೆಯನ್ನೂ ಪ್ರಮಾಣ ಮಾಡಿ ಎಂದಾಗ ಬಳೆ, ಸರ ಬಿಚ್ಚಿ ಪೇಪರ್ನಲ್ಲಿ ಸುತ್ತಿ ಪ್ರಮಾಣ ಮಾಡುತ್ತಾಳೆ. ಈ ವೇಳೆ, ಸೀರೆ ಸೆರಗಿಗೆ ಆಭರಣದ ಪೊಟ್ಟಣ ಕಟ್ಟುತ್ತೇನೆಂದು ಹೇಳಿ ಬರೀ ಕಾಗದ ಕಟ್ಟಿ ಇಬ್ಬರೂ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಆಣೆ-ಪ್ರಮಾಣದ ನಾಟಕಕ್ಕೆ ವೃದ್ಧೆಯ ಲಕ್ಷಾಂತರ ರೂ. ಮೌಲ್ಯದ ಬಂಗಾರ ಮಾಯವಾಗಿದ್ದು, ಯಾಮಾರಿದ ವೃದ್ಧೆ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.