ಹೈದರಾಬಾದ್ :ಚೆನ್ನಾಗಿ ಓದುತ್ತಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ತಂದೆ ತನ್ನ 12 ವರ್ಷದ ಮಗನಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ. 6ನೇ ತರಗತಿಯ ಹುಡುಗ ಈಗ ಶೇ.60ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಘಟನೆ ಹಿನ್ನೆಲೆ :ನಗರ್ ಕರ್ನೂಲ್ ಜಿಲ್ಲೆಯ ನಿವಾಸಿಗಳಾದ ಬಾಲು ದಂಪತಿ ತಮ್ಮ ಮಗ ಚರಣ್ನೊಂದಿಗೆ ಹೈದರಾಬಾದ್ನ ಕೆಪಿಹೆಚ್‌ಬಿ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಶಾಲೆಗಳಿನ್ನೂ ಆರಂಭವಾಗದ ಕಾರಣ ಚರಣ್ ಮನೆಯಲ್ಲಿಯೇ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಾ, ಟ್ಯೂಷನ್ಗೆ ಹೋಗುತ್ತಿದ್ದ.
ಇದನ್ನೂ ಓದಿ: ಕುಲ್ಗಾಮ್ನಲ್ಲಿ ತೀವ್ರ ಚಳಿಗೆ ಮಕ್ಕಳಿಬ್ಬರ ಸಾವು
ನಿನ್ನೆ ರಾತ್ರಿ ಟಿವಿ ನೋಡುತ್ತಾ ಕುಳಿತಿದ್ದ ಚರಣ್ಗೆ ಬಾಲು ಸಿಗರೇಟ್ ತರಲು ಅಂಗಡಿಗೆ ಕಳುಹಿಸಿದ್ದಾರೆ. ಚರಣ್ ಹಿಂದಿರುಗುವುದು ಸ್ವಲ್ಪ ವಿಳಂಬವಾಗಿದ್ದಕ್ಕೆ ಕೋಪಗೊಂಡಿರುವ ಬಾಲು, ನೀನು ಟ್ಯೂಷನ್ಗೆ ಪ್ರತಿದಿನ ಹೋಗುತ್ತಿಲ್ಲ. ಸರಿಯಾಗಿ ವಿದ್ಯಾಭ್ಯಾಸ ಮಾಡುತ್ತಿಲ್ಲವೆಂದು ಬೈದು, ಚರಣ್ಗೆ ಹೊಡೆಯಲು ಶುರು ಮಾಡಿದ್ದಾರೆ.
ಇದನ್ನು ತಡೆಯಲು ಬಂದ ಪತ್ನಿಯನ್ನು ದೂಡಿ, ಮಗನ ಮೇಲೆ ಟರ್ಪೆಂಟ್ ಆಯಿಲು ಸುರಿದು ಬೆಂಕಿ ಹಚ್ಚಿದ್ದಾನೆ. ನೋವನ್ನು ಸಹಿಸಲಾಗದೆ ಚರಣ್ ಓಡಿ ಬಂದು ಮನೆಯ ಸಮೀಪವಿದ್ದ ಶಾಲೆಯ ಹಿಂದಿರುವ ಹಳ್ಳಕ್ಕೆ ಹಾರಿದ್ದಾನೆ.
ಇದನ್ನು ಕಂಡ ಸ್ಥಳೀಯರು ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚರಣ್ ಸ್ಥಿತಿ ಗಂಭೀರವಾಗಿದ್ದು, ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಪಿಹೆಚ್‌ಬಿ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.